ಬಾಂಬೆ ಹೈಕೋರ್ಟ್
ಮುಂಬೈ: ‘ಆಪರೇಷನ್ ಸಿಂಧೂರ’ ಮೂಲಕ ಭಯೋತ್ಪಾದಕರ ವಿರುದ್ಧ ಸಮರ ಸಾರಿದ ಭಾರತದ ಕ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದ ಪುಣೆಯ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಬಾಂಬೆ ಹೈಕೋರ್ಟ್‌ನ ನೀಡಿದ ಜಾಮೀನು ಪಡೆದು ಇವರು ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ.
ಎಂಜಿನಿಯರಿಂಗ್ ಓದುತ್ತಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿನಿಯ ಪೋಸ್ಟ್‌ಗೆ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡ ಕ್ರಮವು ಆಘಾತಕಾರಿ ಮತ್ತು ತೀವ್ರವಾದದ ಕ್ರಮವಾಗಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡಲು ಮುಂದಾಗಿರುವ ಪೊಲೀಸರು, ಆಕೆಯನ್ನು ದೊಡ್ಡ ಅಪರಾಧಿ ಎಂಬಂತೆ ಬಿಂಬಿಸಿದ್ದಾರೆ ಎಂದಿದೆ.
ಈ ಪ್ರಕರಣದ ನಂತರ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ತಾತ್ಕಾಲಿಕವಾಗಿ ಹೊರಹಾಕಿದ ಸಿನ್ಹ್‌ಗಡ್ ಅಕಾಡೆಮಿ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧವೂ ಹರಿಹಾಯ್ದಿರುವ ಹೈಕೋರ್ಟ್, ಕಾಲೇಜಿನ ಕ್ರಮಕ್ಕೆ ತಡೆ ನೀಡಿದೆ. 2ನೇ ವರ್ಷದ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ನ್ಯಾ. ಗೌರಿ ಗೋಡ್ಸೆ ಮತ್ತು ನ್ಯಾ. ಸೋಮಶೇಖರ್ ಸುದರ್ಶನ್ ಅವರಿದ್ದ ರಜಾಕಾಲದ ವಿಭಾಗೀಯ ಪೀಠವು ಅನುಮತಿ ನೀಡಿತು.
ಹೈಕೋರ್ಟ್‌ನ ಆದೇಶದಂತೆ ಯರವಾಡ ಜೈಲಿನಲ್ಲಿದ್ದ ವಿದ್ಯಾರ್ಥಿನಿಯನ್ನು ಬಿಡುಗಡೆ ಮಾಡಿ, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಕೀಲೆ ಫರ್ಹಾನ್ ಶಾ ತಿಳಿಸಿದ್ದಾರೆ.
ಹೈಕೋರ್ಟ್‌ನ ಆದೇಶದಂತೆ ವಿದ್ಯಾರ್ಥಿನಿಗೆ ಗುರುತಿನ ಚೀಟಿಯನ್ನು ಕಾಲೇಜು ನೀಡಿದೆ. ಆದರೆ ಪೊಲೀಸ್ ವಶದಲ್ಲಿದ್ದ ವಿದ್ಯಾರ್ಥಿನಿ ಈಗಾಗಲೇ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ. ಬಾಕಿ ಉಳಿದ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿನಿಯು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯಕ್ಕೆ ವಿಶೇಷ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ಅವಕಾಶ ನೀಡಿದೆ.
‘ಈ ಪ್ರಕರಣದಲ್ಲಿ ಇನ್ಯಾವುದೇ ನಿರ್ದೇಶನದ ಅಗತ್ಯವಿಲ್ಲ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 9ರಂದು ನಡೆಸಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಬೇಕು. ಒಬ್ಬರು ಮೇಲ್ವಿಚಾರಕರನ್ನು ನೇಮಿಸಬೇಕು. ಮಹಿಳೆ ಮತ್ತು ಪುರುಷರನ್ನು ಒಳಗೊಂಡು ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಭದ್ರತೆ ಒದಗಿಸಬೇಕು’ ಎಂದು ಹೈಕೋರ್ಟ್ ಹೇಳಿದೆ.
ಘಟನೆಯ ಹಿನ್ನೆಲೆ: ವಿದ್ಯಾರ್ಥಿನಿ ಮೇ 7ರಂದು ತನ್ನ ಇನ್‌ಸ್ಟಾಗ್ರಾಂನಲ್ಲಿ ‘Reformistan’ ಎಂದು ಬರೆದುಕೊಂಡು ಆಪರೇಷನ್ ಸಿಂಧೂರ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ ಪೋಸ್ಟ್ ಒಂದನ್ನು ಮರುಹಂಚಿಕೊಂಡಿದ್ದರು. ತಕ್ಷಣ ಅದನ್ನು ಅಳಸಿಹಾಕಿದ ಅವರು, ಕ್ಷಮೆಯಾಚಿಸಿದ್ದರು. ಪುಣೆ ಪೊಲೀಸರು ಮೇ 9ರಂದು ವಿದ್ಯಾರ್ಥಿನಿಯನ್ನು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನದಡಿ ಯರವಾಡ ಜೈಲಿಗೆ ಕಳುಹಿಸಲಾಗಿತ್ತು.
ಎಫ್‌ಐಆರ್ ರದ್ಧತಿ ಹಾಗೂ ಕಾಲೇಜಿನಿಂದ ತಾತ್ಕಾಲಿಕವಾಗಿ ಹೊರಹಾಕಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.