ADVERTISEMENT

ನ್ಯಾಯ ದೊರಕಿತು: ಪಹಲ್ಗಾಮ್‌ನಲ್ಲಿ ಮೃತಪಟ್ಟವರ ಕುಟುಂಬದವರ ಪ್ರತಿಕ್ರಿಯೆ...

ಏಜೆನ್ಸೀಸ್
Published 7 ಮೇ 2025, 4:35 IST
Last Updated 7 ಮೇ 2025, 4:35 IST
<div class="paragraphs"><p>ಆಪರೇಷನ್‌ ಸಿಂಧೂರ</p></div>

ಆಪರೇಷನ್‌ ಸಿಂಧೂರ

   

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್‌ ಸಿಂಧೂರ’ ಕೈಗೊಂಡು ಪಾಕಿಸ್ತಾನದ ಉಗ್ರರ 9 ನೆಲೆಗಳ ಮೇಲೆ ದಾಳಿ ನಡೆಸಿದೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಪಹಲ್ಗಾಮ್‌ನಲ್ಲಿ ಮೃತರಾದ ಕುಟುಂಬದವರು ‘ನ್ಯಾಯ ದೊರಕಿತು’ ಎಂದು ಕಣ್ಣೀರಾಗಿದ್ದಾರೆ.

ADVERTISEMENT

ಪಹಲ್ಗಾಮ್‌ನಲ್ಲಿ ಮೃತಪಟ್ಟ ಪುಣೆಯ ಸಂತೋಷ್ ಜಗದಲೆ ಎನ್ನುವವರ ಮಗಳು ಮಾತನಾಡಿ, ‘ಆಪರೇಷನ್‌ನ ಹೆಸರು ಕೇಳಿ ಖುಷಿಯಿಂದ ಕಣ್ಣೀರು ಸುರಿಸಿದ್ದೇನೆ, ಉಗ್ರರ ಗುಂಡಿಗೆ ಬಲಿಯಾದವರಿಗೆ ಸಿಕ್ಕ ನಿಜವಾದ ನ್ಯಾಯವಾಗಿದೆ ಮತ್ತು ನಿಜವಾದ ಗೌರವವಾಗಿದೆ’ ಎಂದು ಹೇಳಿದ್ದಾರೆ.

ಮೃತ ಉದ್ಯಮಿ ಶುಭಂ ದ್ವಿವೇದಿ ಪತ್ನಿ ಮಾತನಾಡಿ, ‘ನನ್ನ ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಪ್ರತೀಕಾರ ತೀರಿಸಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪತಿಯ ಸಾವಿಗೆ ಸಿಕ್ಕ ಗೌರವಾಗಿದೆ. ಅವರು ಎಲ್ಲಿದ್ದರೂ ಅವರಿಗೆ ಇಂದು ಶಾಂತಿ ದೊರಕಿಲಿದೆ’ ಎಂದಿದ್ದಾರೆ.

ಭಾರತೀಯ ನೌಕಾಪಡೆ ಅಧಿಕಾರಿ ವಿನಯ್‌ ನರ್‌ವಾಲ್‌ ತಾಯಿ ಆಶಾ ನರ್‌ವಾಲ್‌ ಮಾತನಾಡಿ, ‘ಮೋದಿ ಅವರೊಂದಿಗೆ ನನ್ನ ಇಡೀ ಕುಟುಂಬ ಇರಲಿದೆ, ದಾಳಿ ಮುಂದುವರಿಸಿ ಎಂದು ಸಶಸ್ತ್ರ ಪಡೆಗಳಿಗೆ ಹೇಳುತ್ತೇನೆ, ಪಹಲ್ಗಾಮ್‌ನಲ್ಲಿ ಜೀವತೆತ್ತ ಪ್ರತಿಯೊಬ್ಬರಿಗೂ ಇಂದು ನ್ಯಾಯ ದೊರಕಿದೆ’ ಎಂದು ಹೇಳಿದ್ದಾರೆ. 

ಮದುವೆಯಾಗಿ ಪತ್ನಿ ಹಿಮಾಂಶಿಯೊಂದಿಗೆ ಮಧುಚಂದ್ರಕ್ಕೆ ತೆರಳಿದ್ದ ವಿನಯ್‌ ಉಗ್ರರ ಗುಂಡೇಟಿಗೆ ಸಿಲುಕಿ ಮೃತಪಟ್ಟಿದ್ದರು. ಮದುವೆಯಾದ ಆರು ದಿನಕ್ಕೆ ಪತಿಯನ್ನ ಕಳೆದುಕೊಂಡ ಹಿಮಾಂಶಿ ಮೃತದೇಹದ ಪಕ್ಕ ಮೂಕಳಾಗಿ ಕುಳಿತಿದ್ದ ಫೋಟೊ ಇಡೀ ದೇಶದ ಜನ ಮುಮ್ಮಲ ಮರುಗುವಂತೆ ಮಾಡಿತ್ತು.

ಪಹಲ್ಗಾಮ್‌ನಲ್ಲಿ ಮೃತರಾದ ಕರ್ನಾಟಕದ ಮಂಜುನಾಥ್‌ ರಾವ್‌ ಅವರ ತಾಯಿ ಸುಮತಿ ಮಾತನಾಡಿ, ‘ನನ್ನ ಮಗನ ತ್ಯಾಗ ವ್ಯರ್ಥವಾಗಲಿಲ್ಲ... ಪ್ರಧಾನಿ ಮೋದಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ನಾವು ಆಶಿಸಿದ್ದೆವು, ಮತ್ತು ಅವರು ಅದನ್ನು ಮಾಡಿದರು’ ಎಂದಿದ್ದಾರೆ.

ಮೃತರಾದ ಗುಜರಾತ್‌ನ ಸುಮಿತ್‌ ಮತ್ತು ಯತಿಶ್‌ ಪರ್ಮಾರ್ ಸಂಬಂಧಿ ಮಾತನಾಡಿ, ‘ಘಟನೆ ನಡೆದ 15 ದಿನಗಳ ನಂತರ, ಭಾರತೀಯ ಸೇನೆ ಆ ಭಯೋತ್ಪಾದಕರ ಮೇಲೆ ದಾಳಿ ಮಾಡಿತು. ಭಾರತೀಯ ಸೇನೆ ಮತ್ತು ಪ್ರಧಾನಿ ಮೋದಿ ಅವರು ಹೇಳಿದಂತೆ ಮಾಡಿದ್ದಾರೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.

ಉಗ್ರರ ದಾಳಿಯಲ್ಲಿ ಮೃತರಾದ ಬೆಂಗಳೂರಿನ ಭರತ್‌ ಭೂಷಣ್‌ ಸಹೋದರ ಪ್ರೀತಮ್‌ ಮಾತನಾಡಿ, ‘ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡಿರುವುದರಿಂದ ನಾವು ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.