ವಿಕ್ರಂ ಮಿಸ್ರಿ
ಎಕ್ಸ್ ಚಿತ್ರ
ನವದೆಹಲಿ: ಭಾರತದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯು ಬುಧವಾರ (ಮೇ 7) ರಾತ್ರಿ ದಾಳಿಯ ಯತ್ನ ನಡೆಸಿದ್ದು, ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಕುರಿತು ವಿದೇಶಾಂಗ ಸಚಿವಾಲಯದಲ್ಲಿ ಗುರುವಾರ ಮಾಹಿತಿ ನೀಡಿದ ಅವರು, ‘ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಕೃತ್ಯಕ್ಕೆ ಭಾರತೀಯ ಸೇನೆ ಮೇ 7ರಂದು ಪ್ರತಿಕ್ರಿಯೆ ನೀಡಿದೆಯಷ್ಟೇ’ ಎಂದಿದ್ದಾರೆ.
‘ತನ್ನ ದೇಶದಲ್ಲಿ ಭಯೋತ್ಪಾದಕರೇ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸಿತ್ತು. ಅಲ್ಲಿನ ವಿದೇಶಾಂಗ ಸಚಿವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ ಭಾರತ, ಅದರ ಅಸಲಿಯತ್ತನ್ನು ಜಗತ್ತಿಗೆ ತೋರಿಸಿದೆ. ಜಾಗತಿಕ ಭಯೋತ್ಪಾದನೆಯ ನೆಲೆ ಪಾಕಿಸ್ತಾನದಲ್ಲಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ತಿಳಿದಿದೆ’ ಎಂದು ಹೇಳಿದರು.
‘ಪೂಂಚ್ ಬಳಿಯ ಗುರುದ್ವಾರವನ್ನು ಪಾಕಿಸ್ತಾನ ಗುರಿಯಾಗಿಸಿ ದಾಳಿ ನಡೆಸಿದೆ. ಸಿಖ್ ಸಮುದಾಯದವರು ಮೃತಪಟ್ಟಿದ್ದಾರೆ. ಪಾಕಿಸ್ತಾನ ನಡೆಸುವ ಯಾವುದೇ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಲಿದೆ. ಹೀಗಾಗಿ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಗಮದಲ್ಲಿಟ್ಟುಕೊಂಡು ಪಾಕಿಸ್ತಾನ ವರ್ತಿಸಬೇಕಿದೆ’ ಎಂದು ಮಿಸ್ರಿ ಹೇಳಿದ್ದಾರೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿ, ‘ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದಾರೆ. ಇದರಿಂದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಜೌರಿಯಲ್ಲಿ 16 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಸೇರಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ಪಾಕಿಸ್ತಾನದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿದೆ’ ಎಂದಿದ್ದಾರೆ.
ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿ, ‘ಅದಂಪುರ, ಭಟಿಂಡ, ಚಂಡೀಗಢ, ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪೂರ್ತಾಲಾ, ಜಲಂಧರ್, ಲೂಧಿಯಾನ, ನಾಲ್, ಫಲೋಡಿ ಹಾಗೂ ಭುಜ್ ಅನ್ನು ಗುರಿಯಾಗಿಸಿ ಮೇ 7ರ ಮಧ್ಯ ರಾತ್ರಿ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ದಾಳಿಯನ್ನು ಮಾನವ ರಹಿತ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆ ಮೂಲಕ ಭಾರತೀಯ ಸೇನೆ ನಿಷ್ಕ್ರಿಯೆಗೊಳಿಸಿದೆ’ ಎಂದಿದ್ದಾರೆ.
‘ಕ್ಷಿಪಣಿಗಳ ಅವಶೇಷಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವೆಲ್ಲವೂ ಪಾಕಿಸ್ತಾನದ ದಾಳಿಯನ್ನು ಪುಷ್ಟೀಕರಿಸುತ್ತವೆ. ಪಾಕಿಸ್ತಾನ ದಾಳಿಯ ಯತ್ನ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.