ADVERTISEMENT

Operation Sindoor: ಕಂದಹಾರ್ ವಿಮಾನ ಅಪಹರಣಕಾರ ಯೂಸುಫ್ ಅಜರ್ ಹತ್ಯೆ

ಪಿಟಿಐ
Published 10 ಮೇ 2025, 14:29 IST
Last Updated 10 ಮೇ 2025, 14:29 IST
<div class="paragraphs"><p>ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ದೃಶ್ಯ</p></div>

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ದೃಶ್ಯ

   

ಪಿಟಿಐ ಚಿತ್ರ

ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿ ನೆಲೆಯೂರಿದ್ದ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 1999ರ ಡಿಸೆಂಬರ್‌ನಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದ ರೂವಾರಿಯೂ ಆದ ಜೈಷ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ಸೋದರ ಯೂಸುಫ್ ಅಜರ್‌ (50) ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವಿಮಾನ ಅಪಹರಣಕ್ಕೂ ಒಂದು ವರ್ಷ ಮುಂಚೆ 1998ರಲ್ಲಿ ನಕಲಿ ಪಾಸ್‌ಪೋರ್ಟ್‌ ಪಡೆದಿದ್ದ ಈತ ವಿಮಾನ ಅಪಹರಿಸಿದ್ದ. ಇದಕ್ಕೆ ಅಬ್ದುಲ್ ಲತೀಫ್ ಎಂಬಾತ ನೆರವಾಗಿದ್ದ. ಯೂಸುಫ್ ವಿರುದ್ಧ ಇಂಟರ್‌ಪೋಲ್‌ 2002ರಲ್ಲಿ ರೆಡ್‌ ನೋಟಿಸ್ ಜಾರಿ ಮಾಡಿತ್ತು. ಪಾಕಿಸ್ತಾನಕ್ಕೆ ಭಾರತ ನೀಡಿದ್ದ ‘ಮೋಸ್ಟ್‌ ವಾಂಟೆಡ್‌’ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರು ಸೇರಿಸಲಾಗಿತ್ತು.

179 ಪ್ರಯಾಣಿಕರನ್ನು ಹೊತ್ತು ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್‌ ಏರ್‌ಲೈನ್ಸ್‌ನ ಐಸಿ–814 ವಿಮಾನವನ್ನು ಯೂಸುಫ್ ಅಜರ್ ಅಪಹರಿಸಿದ್ದ. ದೆಹಲಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಆಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಸಹಿತ ಒತ್ತೆಯಾಳುಗಳ ಬಿಡುಗಡೆಗೆ ಭಾರತದ ಬಂಧನದಲ್ಲಿದ್ದ ಜೆಎಎಂ ಸ್ಥಾಪಕ ಭಯೋತ್ಪಾದಕ ಮಸೂದ್ ಅಜರ್‌ ಮತ್ತು ಒಮರ್‌ ಶೇಖರ್ ಹಾಗೂ ಮುಷ್ತಾಕ್ ಅಹ್ಮದ್ ಜ‌ರ್ಗಾರ್‌ನನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದ.

ಜಮ್ಮು ಜೈಲಿನಲ್ಲಿದ್ದ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಲು ಯೂಸುಫ್ ಹಲವು ಬಾರಿ ಯತ್ನಿಸಿದ್ದ. ಇದರ ಭಾಗವಾಗಿ ಢಾಕಾಗೆ ತೆರಳಿದ್ದ ಈತ ಅಲ್ಲಿ ಅಬ್ದುಲ್ ರವೂಫ್ ಮತ್ತು ಇಬ್ರಾಹಿಂ ಅಖ್ತರ್‌ ಎಂಬುವವರನ್ನು ಭೇಟಿ ಮಾಡಿ, ಆಶ್ರಯ ಪಡೆದಿದ್ದ.

ಕಠ್ಮಂಡುಗೆ ಬಂದ ಈತ ಅಲ್ಲಿ ಹಲವು ದಿನಗಳ ಕಾಲ ಕಳೆದ. ಅಲ್ಲಿನ ವಿಮಾನ ನಿಲ್ದಾಣದಲ್ಲಿನ ಭದ್ರತಾ ಲೋಪವನ್ನು ಗಮನಿಸಿದ ಈತ ಅದನ್ನೇ ತನ್ನ ಅಸ್ತ್ರವನ್ನಾಗಿಸಲು ಯೋಜನೆ ರೂಪಿಸಿದ. ಹರ್ಕತ್‌ ಉಲ್ ಮುಜಾಹಿದ್ದೀನ್‌ನಿಂದ ವಿಮಾನ ಅಪಹರಣದ ನೀಲನಕ್ಷೆಯನ್ನು ರವೂಫ್ ಪಡೆದಿದ್ದ. ಜತೆಗೆ ವಿಮಾನದಲ್ಲಿದ್ದವರ ಸುರಕ್ಷಿತ ಬಿಡುಗಡೆಗೆ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡುವ ಬೇಡಿಕೆಯನ್ನು ಮುಂದಿಡುವ ಯೋಜನೆ ರೂಪಿಸಿದ್ದರು.

1999ರ ಡಿ. 24ರಂದು ತಮ್ಮ ಯೋಜನೆಯಂತೆ ಐಸಿ–814 ವಿಮಾನ ಅಪಹರಿಸಿದ್ದರು. 11 ಸಿಬ್ಬಂದಿ ಹಾಗೂ 179 ಪ್ರಯಾಣಿಕರಿದ್ದ ಈ ವಿಮಾನ ಏರಿದ ಪಾಕಿಸ್ತಾನ ಮೂಲದ ಐವರು ಭಯೋತ್ಪಾದಕರು ವಿಮಾನ ಅಪಹರಿಸಿದ್ದರು. ಅತ್ತರ್‌, ಶಾಹೀದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್‌ ಇಬ್ರಾಹಿಮ್ ಹಾಗೂ ಶಾಖೀರ್‌ ಈ ಕೃತ್ಯದಲ್ಲಿ ಭಾಗಿಯಾಗಿದ್ದರು.

ದೆಹಲಿಗೆ ಹೊರಟಿದ್ದ ವಿಮಾನ ಮೊದಲು ಅಮೃತಸರದಲ್ಲಿ ಇಳಿಸಲಾಯಿತು. ನಂತರ ಲಾಹೋರ್‌ ಹಾಗೂ ಅಬುಧಾಬಿಗೆ ತೆಗೆದುಕೊಂಡು ಹೋಗಲಾಯಿತು. ಅಂತಿಮವಾಗಿ ಕಂದಹಾರ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐಸಿ–814 ವಿಮಾನದಲ್ಲಿದ್ದ ಪ್ರಯಾಣಿಕರು 1999ರ ಡಿ. 31ರಂದು ಬಿಡುಗಡೆಗೊಂಡರು.

ಈ ಘಟನೆ ನಡೆದು 26 ವರ್ಷಗಳ ನಂತರ ಯೂಸುಫ ಅಜರ್‌ ಸೇನಾ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್‌ ಸಿಂಧೂರ’ ಆರಂಭಿಸಿದ ಭಾರತೀಯ ಸೇನೆಯು ಮೇ 7ರಂದು ಭಹವಾಲ್‌ಪುರದಲ್ಲಿದ್ದ ಜೈಶ್ ಎ ಮೊಹಮ್ಮದ್‌ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಯೂಸುಫ್ ಅಜರ್‌ ಸಹಿತ 26 ಭಯೋತ್ಪಾದಕರು ಹತರಾದರು.

ಭಾರತದ ದಾಳಿಯಲ್ಲಿ ಐವರು ಪ್ರಮುಖ ಭಯೋತ್ಪಾದಕರು ಹತರಾಗಿದ್ದಾರೆ. ಮುರಿಡ್ಕೆನಲ್ಲಿದ್ದ ಲಷ್ಕರ್ ಎ ತಯಬಾದ ತರಬೇತಿ ಕೇಂದ್ರವನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿತು. ಇದರಲ್ಲಿ ಮುದಸ್ಸಾರ್ ಖಾಡಿಯನ್ ಖಾಸ್ ಅಲಿಯಾಸ್‌ ಅಬುದ ಜುಂದಾಲ್‌ ಮತ್ತು ಖಾಲಿದ್ ಅಲಿಯಾಸ್ ಅಬು ಅಕಾಶಾ, ಹಫೀಜ್‌ ಮೊಹಮ್ಮದ್‌ ಜಮೀಲ್ ಮತ್ತು ಮೊಹಮ್ಮದ್‌ ಹಸ್ಸನ್ ಖಾನ್‌ ಮೃತಪಟ್ಟಿದ್ದಾರೆ.

ಮಸೂದ್ ಅಜರ್‌ ಕುಟುಂಬದಲ್ಲಿ ಆತನ ಸೋದರಿ ಹಾಗೂ ಬಾವ ಭಹವಾಲ್‌ಪುರದಲ್ಲಿ ನೆಲೆಸಿದ್ದರು. ಇವರನ್ನೂ ಒಳಗೊಂಡು ಹತ್ತು ಜನರು ಭಾರತದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ಖಾತ್ರಿಪಡಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.