ADVERTISEMENT

ತಿಂಗಳಾಂತ್ಯಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಕಾರ್ಯಾರಂಭ: ಜೋತಿರಾದಿತ್ಯ ಸಿಂಧಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2023, 4:38 IST
Last Updated 9 ಡಿಸೆಂಬರ್ 2023, 4:38 IST
<div class="paragraphs"><p>ಜ್ಯೋತಿರಾದಿತ್ಯ ಸಿಂಧಿಯಾ </p></div>

ಜ್ಯೋತಿರಾದಿತ್ಯ ಸಿಂಧಿಯಾ

   

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಗಳಾಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆಗೆ ಆರಂಭವಾಗಲಿದೆ ಎಂದು ಕೇಂದ್ರದ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಪರಿಶೀಲನೆ ನಡೆಸಿದ್ದೇನೆ. ಮೊದಲ ಹಂತ ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳಾಂತ್ಯಕ್ಕೆ ವಿಮಾನಗಳ ಕಾರ್ಯಾಚರಣೆ ಆರಂಭವಾಗಲಿದೆ. ವಿಮಾನ ನಿಲ್ದಾಣದ ಪ್ರಗತಿ ಕುರಿತು ಪ್ರತಿದಿನ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನವೇ ವಿಮಾನ ನಿಲ್ದಾಣ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

‘ವಿಮಾನ ನಿಲ್ದಾಣದ ಮೊದಲ ಹಂತವು 6,250 ಚದರ ಮೀಟರ್‌ಗಳಷ್ಟು ವಿಸ್ತಾರವಾದ ಟರ್ಮಿನಲ್ ಅನ್ನು ಒಳಗೊಂಡಿದೆ. ಅಯೋಧ್ಯೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಮಾನ ನಿಲ್ದಾಣ ಪ್ರತಿಬಿಂಬಿಸುತ್ತದೆ. 2ನೇ ಹಂತದ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಅಧಿಕ ವಿಮಾನಗಳು ನಿಲ್ದಾಣದಲ್ಲಿ ಇಳಿಯಬಹುದು’ ಎಂದು ಸಿಂಧಿಯಾ ತಿಳಿಸಿದ್ದಾರೆ.

3 ವರ್ಷದಲ್ಲಿ ಬುಲೆಟ್ ರೈಲು: ಅಹಮದಾಬಾದ್‌ನ ಸಬರಮತಿ ಮಲ್ಟಿಮೋಡಲ್ ಟ್ರಾನ್ಸ್‌ಪೋರ್ಟ್ ಹಬ್‌ನಲ್ಲಿ ದೇಶದ ಮೊದಲ ಬುಲೆಟ್ ರೈಲು ಟರ್ಮಿನಲ್‌ ನಿರ್ಮಾಣವಾಗಲಿದ್ದು, ಇದರ ವಿಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಿಂಧಿಯಾ, ‘ಬುಲೆಟ್ ಟ್ರೈನ್ ಯೋಜನೆಯ ಮೊದಲ ಹಂತವೂ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ರೈಲುಗಳು ಕಾರ್ಯನಿರ್ವಹಿಸಲಿವೆ’ ಎಂದು ಹೇಳಿದ್ದಾರೆ.

2047ರ ವೇಳೆಗೆ ದೇಶದಲ್ಲಿ ದಿನನಿತ್ಯ 4,500 ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗವನ್ನು ಕ್ರಮಿಸಲಿವೆ ಎಂದು ಸಿಂಧಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.