ADVERTISEMENT

ಇಬ್ಬಾಗದತ್ತ ವಿರೋಧಪಕ್ಷ ಎಐಎಡಿಎಂಕೆ: ರಾಜಕೀಯ ಚತುರ ಇಪಿಎಸ್‌

ಪಳನಿಸ್ವಾಮಿ ಕೈಮೇಲು, ಪನ್ನೀರಸೆಲ್ವಂಗೆ ಭಾರಿ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 18:41 IST
Last Updated 11 ಜುಲೈ 2022, 18:41 IST
ಚೆನ್ನೈ ಎಐಎಡಿಎಂಕೆ ಕಚೇರಿಗೆ ಕಂದಾಯ ಅಧಿಕಾರಿಗಳು ಸೋಮವಾರ ಬೀಗ ಹಾಕಿದರು
ಚೆನ್ನೈ ಎಐಎಡಿಎಂಕೆ ಕಚೇರಿಗೆ ಕಂದಾಯ ಅಧಿಕಾರಿಗಳು ಸೋಮವಾರ ಬೀಗ ಹಾಕಿದರು   

ಚೆನ್ನೈ: ಎಐಎಡಿಎಂಕೆಯ ಪಕ್ಷದ ಸಾಮಾನ್ಯ ಶಾಸಕನಾಗಿದ್ದ ಇ.ಪಳನಿಸ್ವಾಮಿ ಅವರು ತಮಿಳುನಾಡು ಮುಖ್ಯಮಂತ್ರಿಯ ಹುದ್ದೆಗೆ ಏರಿದ್ದು ಅಚ್ಚರಿಯ ಬೆಳವಣಿಗೆಯಾಗಿತ್ತು. ಈಗ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಏರಿದ್ದಾರೆ. ಈ ಮೂಲಕ, ಜೆ.ಜಯಲಲಿತಾ ಅವರ ಉತ್ತರಾಧಿಕಾರಿ ತಾವು ಎಂಬಂತಹ ಸ್ಥಿತಿಯನ್ನು ಅವರು ನಿರ್ಮಿಸಿಕೊಂಡಿದ್ದಾರೆ.

ಪಳನಿಸ್ವಾಮಿ ಅವರ ಇಲ್ಲಿಯವರೆಗಿನ ಹಾದಿ ಬಹಳ ದೀರ್ಘವಾದುದ್ದಾಗಿತ್ತು.‌ಈ ಪ್ರಯಾಣದಲ್ಲಿ ಪಳನಿಸ್ವಾಮಿ ಅವರು ಪಕ್ಷದಿಂದ ಹೊರಗಟ್ಟಿದ್ದು ತಮ್ಮ ಎದುರಾಳಿ ಒ.ಪನ್ನೀರಸೆಲ್ವಂ ಅವರನ್ನು ಮಾತ್ರವಲ್ಲ. ಎಐಎಡಿಎಂಕೆಯ ಅತ್ಯಂತ ಪ್ರಬಲ ನಾಯಕಿಯಾಗಿದ್ದ ವಿ.ಕೆ.ಶಶಿಕಲಾ ಅವರನ್ನೂ ತಮ್ಮ ರಾಜಕೀಯ ಭವಿಷ್ಯದ ಹಾದಿಯಿಂದ ಪಳನಿಸ್ವಾಮಿ ಅವರು ಬದಿಗೆ ಸರಿಸಿದ್ದಾರೆ.

2016ರಲ್ಲಿ ಜಯಲಲಿತಾ ಅವರು ಸರ್ಕಾರ ರಚಿಸಿದಾಗ, ಪಳನಿಸ್ವಾಮಿ ಅಂದಿನ ಸಂಪುಟದ ನಾಲ್ಕನೇ ಸ್ಥಾನದಲ್ಲಿದ್ದರು. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಪನ್ನೀರಸೆಲ್ವಂ ಅವರು, ಶಶಿಕಲಾ ಅವರ ವಿರುದ್ಧ ಬಂಡಾಯ ಎದ್ದಿದ್ದರು. ಪನ್ನೀರಸೆಲ್ವಂ ಅವರನ್ನು ಮೂಲೆಗುಂ‍ಪು ಮಾಡಲು ಶಶಿಕಲಾ ಅವರು, ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದರು. ಬಹುಶಃ ಶಶಿಕಲಾ ಅವರು ತಮ್ಮ ಆ ನಿರ್ಧಾರದ ಬಗ್ಗೆ ಈಗ ಪರಿತಪಿಸುತ್ತಿರಬಹುದು.

ADVERTISEMENT

ಶಶಿಕಲಾ ಜೈಲಿಗೆ ಹೋದನಂತರ, ಅವರ ಸಂಬಂಧಿಗಳು ಮತ್ತು ಬೆಂಬಲಿಗರನ್ನು ಪಳನಿಸ್ವಾಮಿ ಅವರು ಅಧಿಕಾರ ಕೇಂದ್ರದಿಂದ ದೂರವಿಟ್ಟರು. ಶಶಿಕಲಾ ಮತ್ತು ಪನ್ನೀರಸೆಲ್ವಂ ಅವರು ಪ್ರತಿನಿಧಿಸುವ ತೇವರ್ ಸಮುದಾಯದ ನಾಯಕರನ್ನು ತಮ್ಮತ್ತ ಸೆಳೆದುಕೊಂಡರು. 2021ರಲ್ಲಿ ಶಶಿಕಲಾ ಜೈಲಿನಿಂದ ಬಿಡುಗಡೆಯಾದಾಗ, ತೇವರ್ಸಮುದಾಯದ ಯಾವ
ನಾಯಕರೂ ಅವರತ್ತ ಸುಳಿಯದಂತೆ ನೋಡಿಕೊಂಡರು. ಈ ಮೂಲಕ ಶಶಿಕಲಾ ಅವರನ್ನು ದುರ್ಬಲವಾಗಿಸಿದರು.

2017ರಲ್ಲಿ ಪಕ್ಷದಲ್ಲಿ ತೆರೆಮರೆಯ ನಾಯಕನಂತಿದ್ದ ಪಳನಿಸ್ವಾಮಿ ಅವರು ಐದೇ ವರ್ಷದಲ್ಲಿ, 2022ರಲ್ಲಿ ಪಕ್ಷದ ಮುಂದಾಳುವಿನ ಹುದ್ದೆಗೆ ನೇಮಕಗೊಂಡಿದ್ದಾರೆ. ಪಕ್ಷದ ಸಂಸ್ಥಾಪಕ ಎಂಜಿಆರ್‌ ಅವರ ನಿಧನದ ನಂತರ ದೀರ್ಘಾವಧಿಯವರೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಇದ್ದದ್ದು ಜಯಲಲಿತಾ ಮಾತ್ರ. ಈಗ ಪಳನಿಸ್ವಾಮಿ ಆ ಹುದ್ದೆಯತ್ತ ಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.