ADVERTISEMENT

ಓವೈಸಿ ಹೆಸರಲ್ಲಿ ಹೂಡಿಕೆ ಉತ್ತೇಜಿಸುವ ಡೀಪ್‌ಫೇಕ್ ವಿಡಿಯೊ: ದೂರು ದಾಖಲು

ಪಿಟಿಐ
Published 7 ಜೂನ್ 2025, 10:51 IST
Last Updated 7 ಜೂನ್ 2025, 10:51 IST
<div class="paragraphs"><p>ಅಸಾದುದ್ಧೀನ್‌ ಓವೈಸಿ</p></div>

ಅಸಾದುದ್ಧೀನ್‌ ಓವೈಸಿ

   

ಪಿಟಿಐ

ಹೈದರಾಬಾದ್: ಆನ್‌ಲೈನ್ ಹೂಡಿಕೆ ಯೋಜನೆಯನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ತಮ್ಮ ಡೀಪ್‌ಫೇಕ್ ವಿಡಿಯೊ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಎಐ- ಸೃಷ್ಟಿಸಿದ ನಕಲಿ ವಿಡಿಯೊದಲ್ಲಿ ಓವೈಸಿ ಅವರ ಚಿತ್ರ, ಹೆಸರು ಜೊತೆಗೆ ಇತರ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಬಳಸಲಾಗಿದೆ. ಅವರೆಲ್ಲರೂ ಹೂಡಿಕೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನಂಬುವಂತೆ ದಾರಿ ತಪ್ಪಿಸಲಾಗಿದೆ. ಈ ನಕಲಿ ವಿಡಿಯೊದಲ್ಲಿ ಪ್ರತಿದಿನ ₹53,000 ಲಾಭದ ಭರವಸೆ ನೀಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ವಿಡಿಯೊದಲ್ಲಿ ಜನರಿಗೆ ವೆಬ್‌ಸೈಟ್‌ನಲ್ಲಿ ಹೂಡಿಕೆ ಮಾಡುವಂತೆ ನಿರ್ದೇಶಿಸಲಾಗುತ್ತಿದೆ. ಇದರಿಂದಾಗಿ ಮುಗ್ಧ ಜನರು ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ಓವೈಸಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಮುಗ್ಧ ಜನರನ್ನು ಆಕರ್ಷಿಸಲು ಮತ್ತು ನನ್ನ ಹೆಸರಿನಲ್ಲಿ ಸುಳ್ಳು ಪ್ರಚಾರ ಮಾಡುವ ದುರುದ್ದೇಶದಿಂದ ಈ ವಿಡಿಯೊವನ್ನು ರಚಿಸಿ ಅಪ್‌ಲೋಡ್ ಮಾಡಲಾಗಿದೆ ಎಂದು ಓವೈಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಡಿಯೊದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಲಿಪ್‌ಗಳನ್ನೂ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊದ ಮೂಲವನ್ನು ಪತ್ತೆಹಚ್ಚಲು ಮತ್ತು ಪ್ರಸಾರವಾಗುತ್ತಿರುವ ವಿಡಿಯೊವನ್ನು ತೆಗೆದುಹಾಕಲು ವಿವಿಧ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಓವೈಸಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಓವೈಸಿ ಅವರು ನೀಡಿದ ದೂರಿನ ಮೇರೆಗೆ, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜೂನ್ 5ರಂದು ಐಟಿ ಕಾಯ್ದೆ ಮತ್ತು ಬಿಎನ್ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.