ಅಮಿತ್ ಶಾ ಹಾಗೂ ರಾಹುಲ್ ಗಾಂಧಿ
ಪಿಟಿಐ ಚಿತ್ರಗಳು
ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಬುಧವಾರ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತಂತೆ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಸಿಎಂ ಒಮರ್ ಅಬ್ದುಲ್ಲಾ ಹಾಗೂ ಪಿಸಿಸಿ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗಬೇಕು ಮತ್ತು ನಮ್ಮ ಸಂಪೂರ್ಣ ಬೆಂಬಲ ಅವರಿಗೆ ಸಿಗಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಟೊಳ್ಳು ಹೇಳಿಕೆಗಳನ್ನು ನೀಡುವ ಬದಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಹೊಣೆ ಹೊತ್ತುಕೊಳ್ಳುವಂತೆ ಕಾಂಗ್ರೆಸ್ ಮಂಗಳವಾರ ಸರ್ಕಾರವನ್ನು ಒತ್ತಾಯಿಸಿತ್ತು. ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯಿಸಿತ್ತು.
ವಿರೋಧ ಪಕ್ಷವು ಭಯೋತ್ಪಾದಕ ದಾಳಿಯನ್ನು ಮಾನವೀಯತೆಯ ಮೇಲಿನ ಕಪ್ಪು ಚುಕ್ಕೆ ಎಂದು ಖಂಡಿಸಿತ್ತು. ಉಗ್ರರಿಗೆ ತಕ್ಕ ಉತ್ತರ ನೀಡದೆ ಬಿಡಬಾರದು ಎಂದು ಹೇಳಿದೆ.
ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಪ್ರಮುಖ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಕನಿಷ್ಠ 28 ಜನರನ್ನು ಕೊಂದು ಇತರರನ್ನು ಗಾಯಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ 28 ಜನರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.