ADVERTISEMENT

ಭಾರತದ ಮೇಲೆ ನಿರ್ಬಂಧ ಹೇರಿದ ಪಾಕ್ ವಾಯುಪ್ರದೇಶವನ್ನು ಕೈಬಿಟ್ಟ ವಿದೇಶಿ ವಿಮಾನಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2025, 12:57 IST
Last Updated 3 ಮೇ 2025, 12:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಪಹಲ್ಗಾಮ್ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಆದರೆ ವಿದೇಶಗಳ ಹಲವು ವಿಮಾನಗಳೂ ಸ್ವಯಂಪ್ರೇರಣೆಯಿಂದ ಪಾಕಿಸ್ತಾನ ವಾಯುಪ್ರದೇಶವನ್ನು ಕೈಬಿಟ್ಟಿವೆ.

ಪಾಕಿಸ್ತಾನ ಮೂಲದ ನಿಷೇಧಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟನ್ಸ್‌ ಫ್ರಂಟ್‌ನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಅಮಾಯಕ ಪ್ರವಾಸಿಗರನ್ನು ಕೊಂದು ಪರಾರಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಹಲವು ಒಪ್ಪಂದ, ಮಾರ್ಗಗಳನ್ನು ಬಂದ್ ಮಾಡಿತು. 

ADVERTISEMENT

ಪಶ್ಚಿಮ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತ ಮೂಲದ ವಿಮಾನಗಳು ಈಗ ಸುತ್ತಿಬಳಸಿ ಪ್ರಯಾಣಿಸುತ್ತಿವೆ. ಇದು ಹೆಚ್ಚು ಇಂಧನ ಮತ್ತು ಸಮಯವನ್ನೂ ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನದ ಈ ನಿರ್ಬಂಧ ವಿದೇಶಿ ವಿಮಾನಗಳಿಗೆ ಅನ್ವಯಿಸದಿದ್ದರೂ, ಲುಫ್ತಾನ್ಸಾ ಏರ್‌ಲೈನ್ಸ್‌, ಬ್ರಿಟಿಷ್ ಏರ್‌ವೇಸ್‌, ಸ್ವಿಸ್ ಏರ್‌ವೇಸ್‌, ಏರ್‌ ಫ್ರಾನ್ಸ್‌, ಇಟಲಿಯ ಐಟಿಎ ಮತ್ತು ಪೊಲೆಂಡ್‌ನ ಎಲ್‌ಒಟಿ ವಿಮಾನಯಾನ ಸಂಸ್ಥೆಗಳೂ ಪಾಕಿಸ್ತಾನದ ವಾಯುಪ್ರದೇಶವನ್ನು ಕೈಬಿಟ್ಟಿವೆ.

ಇದರಿಂದಾಗಿ ತನ್ನ ವಾಯುಪ್ರದೇಶ ಬಳಕೆಗೆ ಲಭಿಸುತ್ತಿದ್ದ ರಾಯಧನವನ್ನು ಪಾಕಿಸ್ತಾನ ಕಳೆದುಕೊಂಡಿದೆ. ಮತ್ತೊಂದೆಡೆ ಪರ್ಯಾಯ ಮಾರ್ಗದಲ್ಲಿ ಭಾರತೀಯ ವಿಮಾನಗಳು ಸಾಗಬೇಕಿರುವುದರಿಂದ ಹಾರಾಟ ವೆಚ್ಚ ಹೆಚ್ಚಳವಾಗಿ ನಷ್ಟ ಅನುಭವಿಸುತ್ತಿದೆ.

ಭಾರತದ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು ಮೇ 1ರಿಂದ ಪಾಕಿಸ್ತಾನ ವಾಯುಪ್ರದೇಶ ಬಳಸುವಂತಿಲ್ಲ. ಇದರಿಂದಾಗಿ ತನಗೆ 60 ಕೋಟಿ ಅಮೆರಿಕನ್‌ ಡಾಲರ್‌ನಷ್ಟು ನಷ್ಟವಾಗುತ್ತಿದ್ದು, ಈ ಪರಿಸ್ಥಿತಿ ನಿಭಾಯಿಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಏರ್‌ ಇಂಡಿಯಾ ಹೇಳಿದ್ದು ವರದಿಯಾಗಿದೆ.

ಪಾಕಿಸ್ತಾನದ ಕ್ರಮದ ಬೆನ್ನಲ್ಲೇ ಭಾರತವೂ ತನ್ನ ವಾಯುಪ್ರದೇಶದ ಮೇಲೆ ಪಾಕಿಸ್ತಾನದ ವಿಮಾನಗಳ ಹಾರಾಟಕ್ಕೆ ಏ. 30ರಿಂದ ನಿರ್ಬಂಧ ಹೇರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.