ADVERTISEMENT

ಜಮ್ಮು & ಕಾಶ್ಮೀರ ಪ್ರವಾಸೋದ್ಯಮಕ್ಕೆ ಪಹಲ್ಗಾಮ್ ದಾಳಿಯ ಪೆಟ್ಟು: ಒಮರ್ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 16:17 IST
Last Updated 31 ಜುಲೈ 2025, 16:17 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಸಂಗ್ರಹ ಚಿತ್ರ – ಪಿಟಿಐ

ಅಹಮದಾಬಾದ್‌: ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯು ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ, ಪ್ರವಾಸೋದ್ಯಮವನ್ನು ಅವಲಂಭಿಸಿರುವ ಜನರು ಸುಮ್ಮನೆ ಕುಳಿತಿಲ್ಲ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.

ADVERTISEMENT

ಅಬ್ದುಲ್ಲಾ ಅವರು ಗುಜರಾತ್‌ಗೆ ಬುಧವಾರದಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದ ಗುಂಡಿನ ದಾಳಿಯಲ್ಲಿ ಗುಜರಾತ್‌, ಮಹಾರಾಷ್ಟ್ರ ಮತ್ತು ಕರ್ನಾಟಕದವರೂ ಸೇರಿದಂತೆ 26 ಪ್ರವಾಸಿಗರು ಮೃತಪಟ್ಟಿದ್ದರು. ಸೂರತ್‌ನ ಶೈಲೇಶ್‌ ಕಲಥಿಯಾ, ಭಾವನಗರ್‌ನ ಯತೀಶ್‌ ಪಾರ್ಮರ್‌ ಹಾಗೂ ಸಮಿತ್‌ ಪಾರ್ಮರ್‌ (ಅಪ್ಪ–ಮಗ) ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ದಾಳಿಯು ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ನೀಡಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅಬ್ದುಲ್ಲಾ, 'ಪ್ರವಾಸೋದ್ಯಮದ ಮೇಲೆ ಪಹಲ್ಗಾಮ್‌ ದಾಳಿಯು ಪರಿಣಾಮ ಬೀರಿರುವುದನ್ನು ಇಲ್ಲ ಎನ್ನುವುದಿಲ್ಲ. ಋತುವಿನ ಆರಂಭದಲ್ಲೇ ದಾಳಿ ನಡೆದ ಪರಿಣಾಮ, ಪ್ರವಾಸಿಗರು ರಾತ್ರೋರಾತ್ರಿ ಕಣಿವೆಯಿಂದ ಹೊರನಡೆದರು. ಆದರೆ, ಕಾಶ್ಮೀರ ಖಾಲಿಯಾಗಿಲ್ಲ. ನಾವಿಲ್ಲಿಗೆ ಹತಾಶೆಯಿಂದ ಬಂದಿಲ್ಲ. ಹೆಚ್ಚು ಜನರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂಬುದು ನಮ್ಮ ಬಯಕೆ. ಹಾಗಾಗಿ, ಯಾವುದೇ ರೀತಿಯ ತಪ್ಪು ತಿಳಿವಳಿಕೆ ಬೇಡ. ಮಾತಾ ವೈಷ್ಣೋದೇವಿ ಯಾತ್ರೆ ಹಾಗೂ ಅಮರನಾಥ ಯಾತ್ರೆ ಸಲುವಾಗಿ ಲಕ್ಷಾಂತರ ಜನರು (ಪಹಲ್ಗಾಮ್‌ ದಾಳಿ ಬಳಿಕ) ಈಗಾಗಲೇ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ' ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಾಶ್ಮೀರದ ಟ್ರಾವೆಲ್‌ ಏಜೆಂಟ್ಸ್‌ ಸೊಸೈಟಿ (ಟಿಎಎಸ್‌ಕೆ) ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಉತ್ತೇಜನ ಕಾರ್ಯಕ್ರಮದ ಭಾಗವಾಗಿ ಅಬ್ದುಲ್ಲಾ ಗುಜರಾತ್‌ಗೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.