ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ.
ಈ ನಡುವೆ ನಿವೃತ್ತ ಸೇನಾಧಿಕಾರಿ ಕೆಜೆಎಸ್ ಧಿಲ್ಲೋನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜನರಿಗೆ ಜಾಗೃತಿ ಸಂದೇಶ ರವಾನಿಸಿದ್ದಾರೆ.
'ನಿಮ್ಮ ಪಟ್ಟಣ ಅಥವಾ ನಗರದಲ್ಲಿ ಸೇನೆ, ವಾಯುಪಡೆ ಅಥವಾ ನೌಕಾಪಡೆ ಸೇರಿದಂತೆ ಭದ್ರತಾ ಪಡೆಗಳ ಚಲನೆ ಅಥವಾ ಸೇನಾ ವಾಹನಗಳ ಸಂಚಾರ ಕಂಡು ಬಂದರೆ ದಯವಿಟ್ಟು ಯಾವುದೇ ವಿಡಿಯೊ ಅಥವಾ ರೀಲ್‌ಗಳನ್ನು ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.
'ಭದ್ರತಾ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ. ಈ ರೀತಿ ನೀವು(ಜನರು) ಮಾಡಿದರೆ ಉದ್ದೇಶಪೂರ್ವಕವಾಗಿಯೇ ಶತ್ರುಗಳಿಗೆ ಸಹಾಯ ಮಾಡಿದಂತಾಗುತ್ತದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇಂದು ದೇಶದ ವಿವಿಧೆಡೆ ಮಾಕ್ ಡ್ರಿಲ್ (ಸಾಮಾನ್ಯವಾಗಿ ಯುದ್ದ ಸನ್ನದ್ದತೆಯ ಭಾಗವಾಗಿ ನಾಗರಿಕ ಸ್ವರಕ್ಷಣೆ ತಾಲೀಮು) ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ತಿಳಿಸಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಉಗ್ರ ಸಂಘಟನೆಗಳ ಒಂಬತ್ತು ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆಯನ್ನು ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.