ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯಾಗಿದ್ದು, ಈ ಕುರಿತು ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಯ ಸೇನಾ ಜನರಲ್‌ಗಳ ಸಭೆ ಇಂದು (ಸೋಮವಾರ) ಸಂಜೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಾಟ್‌ಲೈನ್ ಮೂಲಕ ನಡೆಯಲಿರುವ ಸಭೆಯು ಈ ಮೊದಲು ಮಧ್ಯಾಹ್ನ 12ಕ್ಕೆ ನಿಗದಿಯಾಗಿತ್ತು. ಆದರೆ ಕೆಲವೇ ಹೊತ್ತಿನ ಮೊದಲು ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ಏ. 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಪಾಕಿಸ್ತಾನ ನೆಲೆಯ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ‘ವನ್ನು ಮೇ 7ರಿಂದ ಆರಂಭಿಸಿ, ಉಗ್ರರ ನೆಲೆಯನ್ನು ಧ್ವಂಸಗೊಳಿಸಿತು.
ಇದರ ಬೆನ್ನಲ್ಲೇ ಎರಡೂ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ಏರ್ಪಟ್ಟಿತ್ತು. ಇದರ ನಡುವೆಯೇ ಶನಿವಾರ ಸಂಜೆ 5ರ ಹೊತ್ತಿಗೆ ಎಲ್ಲಾ ರೀತಿಯ ನೆಲ, ಜಲ ಮತ್ತು ವಾಯು ಸೇನೆಯ ದಾಳಿಯನ್ನು ಸ್ಥಗಿತಗೊಳಿಸುವಂತೆ ಉಭಯ ರಾಷ್ಟ್ರಗಳು ಒಮ್ಮತ ವ್ಯಕ್ತಪಡಿಸಿದವು. ಇದರ ಬೆನ್ನಲ್ಲೇ ಸೇನಾಧಿಕಾರಿಗಳ ಸಭೆ ಆಯೋಜನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.