ADVERTISEMENT

Operation Sindoor | ಅಣ್ವಸ್ತ್ರ ಬೆದರಿಕೆ ನಡೆಯಲ್ಲ; ಅಂಗಲಾಚಿದ ಪಾಕ್: ಮೋದಿ

ದಾಳಿ ನಿಲ್ಲಿಸುವಂತೆ ಅಂಗಲಾಚಿದ ಪಾಕಿಸ್ತಾನ: ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಪಿಟಿಐ
Published 13 ಮೇ 2025, 0:30 IST
Last Updated 13 ಮೇ 2025, 0:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಅಣ್ವಸ್ತ್ರ ಬೆದರಿಕೆ’ ಭಾರತದ ಮುಂದೆ ನಡೆಯುವುದಿಲ್ಲ ಎಂದು ಪಾಕಿಸ್ತಾನಕ್ಕೆ ಸೋಮವಾರ ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆ –ವ್ಯಾಪಾರ ಮತ್ತು ಭಯೋತ್ಪಾದನೆ– ಶಾಂತಿ ಮಾತುಕತೆ ಜತೆಯಾಗಿ ಸಾಗದು’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು. 

‘ಆಪರೇಷನ್‌ ಸಿಂಧೂರ’ ಬಳಿಕ ಇದೇ ಮೊದಲ ಬಾರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ‘ಆಪರೇಷನ್ ಸಿಂಧೂರ’ ಭಯೋತ್ಪಾದನೆಯ ವಿರುದ್ಧ ಭಾರತದ ಹೊಸ ನೀತಿಯಾಗಿದೆ. ನಾವು ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆಯನ್ನು ಸದ್ಯ ತಡೆಹಿಡಿದಿದ್ದೇವೆಯಷ್ಟೆ. ಭವಿಷ್ಯವು ಆ ದೇಶದ ನಡವಳಿಕೆಯನ್ನು ಅವಲಂಬಿಸಿರಲಿದೆ’ ಎಂದು ಸ್ಪಷ್ಟಪಡಿಸಿದರು. 

‘ಪಾಕಿಸ್ತಾನವು ಸೇನಾ ದಾಳಿಯನ್ನು ನಿಲ್ಲಿಸುವಂತೆ ಭಾರತವನ್ನು ಪರಿಪರಿಯಾಗಿ ಬೇಡಿಕೊಂಡಿತು. ತಮ್ಮ ದುಸ್ಸಾಹಸವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರವೇ ಭಾರತವು ಅವರ ಬೇಡಿಕೆಯನ್ನು ಪರಿಗಣಿಸಿತು’ ಎಂದು ಕದನ ವಿರಾಮವನ್ನು ಉಲ್ಲೇಖಿಸಿ ಹೇಳಿದರು. 

ADVERTISEMENT

ಪಹಲ್ಗಾಮ್‌ ದಾಳಿಯನ್ನು ಭಯೋತ್ಪಾದನೆಯ ಅತ್ಯಂತ ‘ಬರ್ಬರ ಮುಖ’ ಎಂದ ಪ್ರಧಾನಿ, 26 ಮುಗ್ಧರ ಸಾವಿಗೆ ಕಾರಣವಾದ ಆ ಘಟನೆಯು ವೈಯಕ್ತಿಕವಾಗಿ ತುಂಬಾ ನೋವು ಉಂಟುಮಾಡಿದೆ ಎಂದರು. ಆದರೆ, ನಮ್ಮ ಮಹಿಳೆಯರ ಹಣೆಯಿಂದ ‘ಸಿಂಧೂರ’ ಅಳಿಸಿದರೆ ಉಂಟಾಗುವ ಪರಿಣಾಮ ಏನೆಂಬುದನ್ನು ಶತ್ರುಗಳ ಅರಿತುಕೊಂಡಿದ್ದಾರೆ ಎಂದರು.

ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿ, ‘ನೀರು ಮತ್ತು ರಕ್ತ ಜತೆಯಾಗಿ ಹರಿಯದು’ ಎಂದರು. ತಮ್ಮ 22 ನಿಮಿಷಗಳ ಭಾಷಣದಲ್ಲಿ ಭದ್ರತಾ ಪಡೆಗಳಿಗೆ ಗೌರವ ಸಲ್ಲಿಸಿದ ಪ್ರಧಾನಿ, ಅವರ ಶೌರ್ಯವನ್ನು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಅರ್ಪಿಸಿದರು.

‘ನಮ್ಮ ಸೇನಾ ಶಕ್ತಿಯಿಂದ ಪಾಕಿಸ್ತಾನದ ಡ್ರೋನ್‌ಗಳನ್ನು ಹೇಗೆ ಹೊಡೆದುರುಳಿಸಲಾಯಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ನಮ್ಮ ಸೇನೆಯು ಪಾಕಿಸ್ತಾನದ ಹೃದಯ ಭಾಗದ ಮೇಲೆ ದಾಳಿ ಮಾಡಿದೆ. ನಮ್ಮ ಕ್ಷಿಪಣಿಗಳು ಅವರ ವಾಯುನೆಲೆಗಳನ್ನು ಹಾನಿಗೊಳಿಸಿವೆ’ ಎಂದು ಹೇಳಿದರು. 

‘ಇಷ್ಟು ವರ್ಷಗಳಿಂದ ನೀವು ಪೋಷಿಸುತ್ತಿರುವ ಭಯೋತ್ಪಾದಕರು ಪಾಕಿಸ್ತಾನವನ್ನೇ ನುಂಗುತ್ತಾರೆ. ನಿಮ್ಮ ದೇಶ ಉಳಿಯಬೇಕಾದರೆ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಿರಿ’ ಎಂದು ಪಾಕಿಸ್ತಾನದ ಆಡಳಿತಗಾರರಿಗೆ ಸಲಹೆ ನೀಡಿದರು.

ಭಾರತ–ಪಾಕ್‌ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದ್ದರೂ ಪ್ರಧಾನಿ ತಮ್ಮ ಭಾಷಣದಲ್ಲಿ ಟ್ರಂಪ್ ಹೆಸರು ಏಕೆ ಉಲ್ಲೇಖಿಸಲಿಲ್ಲ?
ಕಪಿಲ್‌ ಸಿಬಲ್ ರಾಜ್ಯಸಭಾ ಸದಸ್ಯ
ಪ್ರಧಾನಿಯವರ ಭಾಷಣ ಮೋಡಿ ಮಾಡುವಂತಿತ್ತು. ಆದರೆ ಜನರನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇರಲಿಲ್ಲ
ಪೃಥ್ವಿರಾಜ್‌ ಚವಾಣ್ ಕಾಂಗ್ರೆಸ್‌ ನಾಯಕ

ಮೋದಿ ಮಾತು.... 

* ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ ಅದರ ಮೂಲಕ ಭಾರತದ ಸಂಕಲ್ಪ ಕಾರ್ಯರೂಪಕ್ಕೆ ಬರುವುದನ್ನು ಇಡೀ ಜಗತ್ತು ನೋಡಿದೆ. ಭಾರತದ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು

* ನಾವು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ 

* ಇದು ಯುದ್ಧದ ಯುಗವಲ್ಲ. ಆದರೆ ಇದು ಭಯೋತ್ಪಾದನೆಯ ಯುಗವೂ ಅಲ್ಲ

ಯಾವುದಕ್ಕೂ ಸಿದ್ಧ: ಸೇನೆ

ಭಾರತದ ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆ ಭೇದಿಸಲು ಪಾಕಿಸ್ತಾನಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಸೋಮವಾರ ಹೇಳಿದರು.

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಯಿ, ಏರ್‌ಮಾರ್ಷಲ್‌ ಎ.ಕೆ. ಭಾರ್ತಿ ಹಾಗೂ ವೈಸ್‌ ಆಡ್ಮಿರಲ್‌ ಎ.ಎನ್‌. ಪ್ರಮೋದ್‌ ಅವರು ಈ ಮಾತನ್ನು ಹೇಳಿದರು. 

‘ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತ ಕಾರ್ಯಾಚರಣೆ ನಡೆಸಿತು. ಆ ಬಳಿಕ ಪಾಕಿಸ್ತಾನ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತು. ಉಗ್ರರ ಪರ ಪಾಕಿಸ್ತಾನ ನಿಂತಿದ್ದೇ ಸಂಘರ್ಷಕ್ಕೆ ಕಾರಣ. ತಾನು ಅನುಭವಿಸಿದ ನಷ್ಟಕ್ಕೆ ಆ ದೇಶವೇ ಹೊಣೆ’ ಎಂದು ಸ್ಪಷ್ಟಪಡಿಸಿದರು. 

ಪಾಕಿಸ್ತಾನದ ಯಾವೆಲ್ಲ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಪಟ್ಟಿಯನ್ನು ಅವರು ಹಂಚಿಕೊಂಡರು. ಆ ಪಟ್ಟಿಯಲ್ಲಿ ಕರಾಚಿಯೂ ಸೇರಿದೆ. ಭಾರತದ ಮೇಲೆ ದಾಳಿ ಮಾಡುವಾಗ ಪಾಕಿಸ್ತಾನವು ಚೀನಾ ನಿರ್ಮಿತ ಕ್ಷಿಪಣಿಗಳು ಮತ್ತು ಟರ್ಕಿ ಡ್ರೋನ್‌ಗಳನ್ನು ಹೇಗೆ ಬಳಸಿದೆ ಎಂಬುದನ್ನು ತೋರಿಸುವ ಪುರಾವೆಗಳನ್ನು ಅಧಿಕಾರಿಗಳು ಪ್ರಸ್ತುತಪಡಿಸಿದರು.

ನಮ್ಮ ಎಲ್ಲ ಸೇನಾ ನೆಲೆಗಳು ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿದ್ದಲ್ಲಿ ಯಾವುದೇ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿವೆ ಎಂದು ಎ.ಕೆ. ಭಾರ್ತಿ ತಿಳಿಸಿದರು. 

‘ನಮ್ಮ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ನಡೆಸಲು ಪಾಕ್ ಸೇನೆ ಪ್ರಯತ್ನಿಸಿತು. ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ’ ಎಂದರು. ‘ಜಮ್ಮು ಮತ್ತು ಕಾಶ್ಮೀರ, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಅವರು ತಿಳಿಸಿದರು. 

ಕಿರಾನಾ ಬೆಟ್ಟದ ಮೇಲೆ ದಾಳಿ ನಡೆಸಿಲ್ಲ: ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತದ ವಾಯು‍ಪಡೆಯು ದಾಳಿ ನಡೆಸಿದೆ ಎಂಬ ವದಂತಿಗಳನ್ನು ವಾಯುಪಡೆ ಕಾರ್ಯಾಚರಣೆಗಳ ಮುಖ್ಯಸ್ಥ ಏರ್‌ ಮಾರ್ಷಲ್ಲ್
ಎ.ಕೆ. ಭಾರ್ತಿ  ತಳ್ಳಿ ಹಾಕಿದ್ದಾರೆ. 

‘ಕಿರಾನಾ ಬೆಟ್ಟದ ಮೇಲೆ ದಾಳಿ ನಡೆಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಿರಾನಾ ಬೆಟ್ಟದ ಮೇಲೆ ಅಣು ಘಟಕವೊಂದಿದೆ. ಹಾಗಿದ್ದರೂ ಅದರ ಮೇಲೆ ದಾಳಿ ನಡೆಸಲಾಗಿದೆ ಎಂದು  ಸಾಮಾಜಿಕ ಜಾಲತಾಣಗಳಲ್ಲಿನ ವದಂತಿ ಕುರಿತ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಮೊದಲ ಸುತ್ತಿನ ಡಿಜಿಎಂಒ ಮಾತುಕತೆ

ಭಾರತ ಹಾಗೂ ಪಾಕಿಸ್ತಾನದ ಕದನ ವಿರಾಮದ ಕುರಿತು ಇದೇ 10ರಂದು ಮಾಡಿಕೊಂಡ ಒಪ್ಪಂದದ ವಿವಿಧ ಅಂಶಗಳ ಕುರಿತು ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಸೋಮವಾರ ಚರ್ಚಿಸಿದರು. 

ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಮತ್ತು ಭಾರತದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ ಅವರು ಹಾಟ್‌ಲೈನ್ ಮೂಲಕ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.

‘ಎರಡೂ ಕಡೆಯವರು ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಪರಸ್ಪರ ಆಕ್ರಮಣಕಾರಿ ಮತ್ತು ಪ್ರತಿಕೂಲ ಕ್ರಮ ಕೈಗೊಳ್ಳಬಾರದು ಎಂಬ ಬದ್ಧತೆ ಮುಂದುವರಿಸಬೇಕು. ಗಡಿಗಳಿಂದ ಸೈನ್ಯ ಕಡಿಮೆ ಮಾಡುವುದನ್ನು ಖಚಿತ
ಪಡಿಸಿಕೊಳ್ಳಲು ಎರಡೂ ಕಡೆಯವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು’ ಎಂದು ಮೂಲಗಳು ತಿಳಿಸಿವೆ. 

‘ಮಹಾನಿರ್ದೇಶಕರ ಮಾತುಕತೆ ಮುಕ್ತಾಯಗೊಂಡಿದೆ. ಹೆಚ್ಚಿನ ವಿವರಗಳನ್ನು ಸೂಕ್ತ ಸಮಯದಲ್ಲಿ ನೀಡಲಾಗುವುದು’ ಎಂದು ಭಾರತೀಯ ಸೇನೆ ತಿಳಿಸಿದೆ.

ಸಾಂಬಾ ಗಡಿಯಲ್ಲಿ ಡ್ರೋನ್‌ ದಾಳಿ

ಜಮ್ಮು: ಸಾಂಬಾ ಜಿಲ್ಲೆಯ ಗಡಿ ಪ್ರದೇಶ ದಲ್ಲಿ ಸೋಮವಾರ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಭದ್ರತಾ ಪಡೆಗಳು ಅವುಗಳನ್ನು ನಿಷ್ಕ್ರಿಯಗೊಳಿಸಿವೆ. ಪಂಜಾಬ್‌ನ ಜಲಂಧರ್‌ನಲ್ಲಿ ಬೇಹುಗಾರಿಕಾ ಡ್ರೋನ್‌ವೊಂದನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಪ್ರಧಾನಿ ಮೋದಿ ಅವರು ಭಾಷಣ ಮಾಡಿದ ಸ್ವಲ್ಪ ಸಮಯದ ನಂತರ ಡ್ರೋನ್‌ ದಾಳಿ ನಡೆದಿದೆ ಎಂದೂ ಹೇಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಂಬಾ, ಕಠುವಾ, ರಾಜೌರಿ ಹಾಗೂ ಜಮ್ಮುವಿನಲ್ಲಿ ಬ್ಲ್ಯಾಕ್‌ಔಟ್‌ ಮಾಡಲಾಯಿತು. ಮಾತಾ ವೈಷ್ಣೋದೇವಿ ಗುಹಾಂತರ ದೇವಾಲಯದ ಬಳಿಯೂ ವಿದ್ಯುತ್ ದೀಪಗಳನ್ನು ಆರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.