ಭಾರತದ ಕ್ಷಿಪಣಿ ಹೊತ್ತ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ನಾಶಗೊಂಡಿರುವ ಕಟ್ಟಡ
ಎಕ್ಸ್ ಚಿತ್ರ
ನವದೆಹಲಿ: ಭಾರತದ ವಾಯವ್ಯ ಭಾಗದಲ್ಲಿರುವ ಸೇನಾ ಶಿಬಿರಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ, ಲಾಹೋರ್‌ನಲ್ಲಿರುವ ವಾಯುನೆಲೆಯ ಸಂಪರ್ಕ ವ್ಯವಸ್ಥೆಯನ್ನು ಭಾರತೀಯ ಸೇನೆ ಗುರುವಾರ ನಾಶಪಡಿಸಿದೆ.
ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗು ಗುಜರಾತ್‌ನಲ್ಲಿರುವ ಸೇನಾ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದರೊಂದಿಗೆ ಶ್ರೀನಗರ, ಪಠಾಣ್‌ಕೋಟ್, ಅಮೃತಸರ, ಲೂಧಿಯಾನ ಹಾಗೂ ಚಂಡೀಗಢ ಮೇಲೆಯೂ ಪಾಕಿಸ್ತಾನ ಸೇನೆ ದಾಳಿ ನಡೆಸಿತ್ತು.
ಇದಕ್ಕೆ ತಕ್ಕ ಉತ್ತರ ನೀಡಿದ ಭಾರತದ ವಾಯುಸೇನೆ, ಲಾಹೋರ್‌ನಲ್ಲಿರುವ ವಾಯು ನೆಲೆಯಲ್ಲಿದ್ದ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸಿದೆ. ಶೇಖ್‌ಪುರ, ಸಿಯಾಲ್‌ಕೋಟ್, ಗುಜರನ್‌ವಾಲಾ, ನರೊವಾಲಾ ಮತ್ತು ಚಕ್ವಾಲ್ ಮೇಲೂ ಭಾರತದ ಕಾಮಕಾಜಿ ಡ್ರೋನ್ ದಾಳಿ ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇದರಲ್ಲಿ ಏಳು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿವೆ.
ಪಾಕಿಸ್ತಾನ ಸೇನೆಯು ಡ್ರೋನ್ ಬಳಸಿ ಕ್ಷಿಪಣಿ ದಾಳಿ ನಡೆಸಿತ್ತು. ಇದೇ ಮಾದರಿಯಲ್ಲೇ ಭಾರತದ ವಾಯುಸೇನೆಯು ಪಾಕ್‌ಗೆ ಉತ್ತರ ನೀಡಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡಸಿದ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿ ಭಾರತ ಸೇನೆಯು ‘ಆಪರೇಷನ್ ಸಿಂಧೂರ’ವನ್ನು ಬುಧವಾರ ನಸುಕಿನ 1.05ಕ್ಕೆ ಆರಂಭಿಸಿತ್ತು. 25 ನಿಮಿಷಗಳಲ್ಲಿ 9 ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿತ್ತು. ಇದರಲ್ಲಿ ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಎ ತಯಬಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಸಹಿತ ಹಲವರು ಮೃತಪಟ್ಟಿರುವುದನ್ನು ಪಾಕಿಸ್ತಾನ ದೃಢಪಡಿಸಿತ್ತು.
ಸೇನಾ ನೆಲೆಗಳನ್ನು ಮತ್ತು ಸಾಮಾನ್ಯ ಜನರನ್ನು ಗುರಿಯಾಗಿಸಿ ತಾನು ದಾಳಿ ನಡೆಸಿಲ್ಲ ಎಂಬುದನ್ನು ಭಾರತೀಯ ಸೇನೆ ಸ್ಪಷ್ಟವಾಗಿ ಹೇಳಿತ್ತು. ಜತೆಗೆ ಇದರ ಮಾಹಿತಿಯನ್ನೂ ಅಂತರರಾಷ್ಟ್ರೀಯ ಸಮುದಾಯಕ್ಕೆ ನೀಡಿತ್ತು.
ಭಾರತದ ದಾಳಿಗೆ ಪ್ರತಿಯಾಗಿ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದ ಪಾಕಿಸ್ತಾನ, ಉತ್ತರ ಹಾಗೂ ವಾಯವ್ಯ ಭಾಗದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಭಾರತದ ವಾಯು ಸೇನೆ ತಕ್ಕ ಪ್ರತ್ಯುತ್ತರ ನೀಡಿ ಗುರುವಾರ ಮಧ್ಯಾಹ್ನ ಲಾಹೋರ್‌ನ ವಾಯು ನೆಲೆ ಮೇಲೆ ದಾಳಿ ನಡೆಸಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.