ADVERTISEMENT

ಭಗವಾನ್ ರಾಮ ‘ಪೌರಾಣಿಕ ವ್ಯಕ್ತಿ’ ಎಂದ ರಾಹುಲ್ ಹಿಂದೂಗಳ ಕ್ಷಮೆಯಾಚಿಸಲಿ: VHP

ಪಿಟಿಐ
Published 6 ಮೇ 2025, 14:10 IST
Last Updated 6 ಮೇ 2025, 14:10 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನಾಗ್ಪುರ: ‘ಭಗವಾನ್ ರಾಮನನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಪೌರಾಣಿಕ ವ್ಯಕ್ತಿ’ ಎಂದು ಕರೆಯುವ ಮೂಲಕ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದು, ಅವರು ಕ್ಷಮೆ ಯಾಚಿಸಬೇಕು’ ಎಂದು ವಿಶ್ವ ಹಿಂದೂ ಪರಿಷದ್ (VHP) ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಿಎಚ್‌ಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂದೆ, ‘ರಾಹುಲ್ ಗಾಂಧಿ ಅಂಥವರನ್ನು ಹಿಂದೂಗಳು ಅಧಿಕಾರಕ್ಕೆ ತರಬಾರದು’ ಎಂದು ಹೇಳಿದರು.

ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು ನಡೆದ ಸಂವಾದದಲ್ಲಿ ಬಿಜೆಪಿಯ ಹಿಂದೂ ಪರಿಕಲ್ಪನೆಯನ್ನು ಸರಾಸಗಟಾಗಿ ರಾಹುಲ್ ಗಾಂಧಿ ತಿರಸ್ಕರಿಸಿದ್ದರು. ಜತೆಗೆ ಸಮಾಜ ಸುಧಾರಕರು ಮತ್ತು ರಾಜಕೀಯ ಚಿಂತಕರಾದ ಜ್ಯೋತಿಬಾ ಫುಲೆ, ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ, ಗುರುನಾನಕ್‌, ಬಸವಣ್ಣ ಮತ್ತು ಬುದ್ಧರನ್ನು ಉಲ್ಲೇಖಿಸಿದ್ದರು. ಇವರೆಲ್ಲರೂ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದವರು. ಇದುವೇ ಭಾರತದ ಪರಂಪರೆ ಮತ್ತು ಇತಿಹಾಸದ ತಳಹದಿಯಾಗಿದೆ. ಇಂಥ ಮಹಾನ್ ಪುರುಷರನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ. ಭಗವಾನ್ ರಾಮನು ಕ್ಷಮಾಗುಣಗಳನ್ನು ಹೊಂದಿದ ಕರುಣಾಶಾಲಿಯಾಗಿದ್ದರೂ ಅವರು ಪುರಾಣ ಪುರುಷರಾಗಿದ್ದರು ಎಂದು ಬಹಳಷ್ಟು ಕೃತಿಗಳು ಹೇಳುತ್ತವೆ’ ಎಂದು ರಾಹುಲ್ ಹೇಳಿದ್ದರು.

ADVERTISEMENT

ಇದನ್ನು ಉಲ್ಲೇಖಿಸಿರುವ ಪರಾಂದೆ, ‘ರಾಹುಲ್ ಅವರ ಹೇಳಿಕೆ ಹಿಂದೂಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ರಾಮ ಸೇತು ಪ್ರಕರಣದಲ್ಲಿ 2007ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದು ಅವರ ಈ ಆಲೋಚನೆಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಹಿಂದೂ ಸಮುದಾಯವನ್ನು ನಿರಂತರವಾಗಿ ಅವಮಾನಿಸುತ್ತಲೇ ಬಂದಿದ್ದಾರೆ. ಭಗವಾನ್ ರಾಮನನ್ನು ಅವಮಾನಿಸಿದವರು ನಾಶವಾಗುತ್ತಾರೆ ಎಂಬ ಸತ್ಯ ರಾಹುಲ್‌ ಗಾಂಧಿಗೆ ತಿಳಿದಂತಿಲ್ಲ’ ಎಂದಿದ್ದಾರೆ.

‘ಪಹಲ್ಗಾಮ್ ದಾಳಿಯು ಹಿಂದೂಗಳನ್ನೇ ಗುರಿಯಾಗಿಸಿ ನಡೆದಿದೆ. ಭಯೋತ್ಪಾದನೆಗೆ ಧರ್ಮ ಎಂಬುದಿಲ್ಲ ಎಂಬ ಮಾತನ್ನು ಪರಾಮರ್ಶಿಸುವ ಅಗತ್ಯವಿದೆ. ಇಂಥ ಕೃತ್ಯಗಳಿಂದ ಹಿಂದೂಗಳನ್ನು ಹೆದುರಿಸಬಹುದು ಎಂದು ಕೆಲ ಮುಸ್ಲಿಮರು ಅಂದುಕೊಂಡಿದ್ದರೆ ಅದು ಅವರ ತಪ್ಪು ಕಲ್ಪನೆ’ ಎಂದು ಪರಾಂದೆ ಎಚ್ಚರಿಸಿದ್ದಾರೆ.

ಜಾತಿ ಗಣತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜನಗಣತಿ ಮೂಲಕ ಜಾತಿ ಗಣತಿಯ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಲಿದೆ. ವಿಎಚ್‌ಪಿಯು ಜಾತಿ ಮೀರಿ ಹಿಂದೂ ಸಮಾಜಕ್ಕಾಗಿ ಹೋರಾಡುತ್ತದೆ. ಹಿಂದೂ ಸಮಾಜವನ್ನು ಒಗ್ಗೂಡಿಸಿ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯನ್ನು ಜನರಲ್ಲಿ ಮೂಡಿಸುವುದೇ ಸಂಘಟನೆಯ ಧ್ಯೇಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.