ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ಸಂಬಂಧ ಕಡಿದುಕೊಂಡಿದೆ.
ಸಾರ್ಕ್ ವೀಸಾ ಯೋಜನೆ (SVES) ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಭೇಟಿ ನೀಡುತ್ತಿದ್ದರು. ಇದೀಗ ಅದನ್ನು ಭಾರತ ರದ್ದು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಬುಧವಾರ ಸಂಜೆ ನಡೆದ ‘ಭದ್ರತೆ ಕುರಿತ ಸಚಿವ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ವೀಸಾ ಯೋಜನೆ ಅಡಿಯಲ್ಲಿ ಭಾರತಕ್ಕೆ ಬಂದವರು ಮುಂದಿನ 48 ಗಂಟೆಯಲ್ಲಿ ಭಾರತ ತೊರೆಯಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
1992ರಲ್ಲಿ ಪ್ರಾರಂಭವಾದ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ದ ಸದಸ್ಯ ರಾಷ್ಟ್ರಗಳು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನಗಳ ನಡುವೆ ಪ್ರಾದೇಶಿಕ ಸಹಕಾರ, ಜನ ಸಂಪರ್ಕ ಮತ್ತು ಸೌಹಾರ್ದವನ್ನು ಉತ್ತೇಜಿಸುವ ಸಲುವಾಗಿ ರಚನೆಗೊಂಡಿರುವ ಯೋಜನೆ ಇದಾಗಿದೆ.
ಈ ಯೋಜನೆ ಅಡಿಯಲ್ಲಿ ರಾಜತಾಂತ್ರಿಕರು, ಸಂಸದರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಕ್ರೀಡಾಪಟುಗಳು, ಉದ್ಯಮಿಗಳು ಮತ್ತು ವ್ಯಾಪಾರ ವಲಯದಲ್ಲಿನ ನಿರ್ದಿಷ್ಟ ವರ್ಗದವರಿಗೆ ಈ ವಿಶೇಷ ವೀಸಾ ನೀಡಲಾಗುತ್ತದೆ. ಇದರ ಪ್ರಕಾರ ಸಾರ್ಕ್ ಸದಸ್ಯ ದೇಶಗಳ ನಿರ್ದಿಷ್ಟ ವರ್ಗದವರು ಈ ದೇಶಗಳಿಗೆ ಬೇಟಿ ನೀಡಬಹುದು. ಇದರ ಅವಧಿ ಒಂದು ವರ್ಷದವರೆಗೆ ಇರುತ್ತದೆ.
ಇದೀಗ ಭಾರತ ಸರ್ಕಾರ ಪಾಕಿಸ್ತಾನದ ನಾಗರಿಕರಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ರದ್ದು ಮಾಡಿದೆ. ಇದು ಕೂಡ ತಕ್ಷಣದಿಂದಲೇ ಜಾರಿಯಾಗಿದ್ದು ಪಾಕಿಸ್ತಾನದ ಪ್ರಜೆಗಳು ಮುಂದಿನ ಕೆಲವು ಗಂಟೆಗಳಲ್ಲಿ ದೇಶವನ್ನು ತೊರೆಯಬೇಕಾಗಿದೆ.
ಭಾರತ ಸರ್ಕಾರದ ಈ ನಿರ್ಧಾರದಿಂದ ಪಾಕಿಸ್ತಾನ ಪ್ರಜೆಗಳು ಭಾರತಕ್ಕೆ ಭೇಟಿ ನೀಡುವುದು ಬಂದ್ ಆಗಿದೆ. ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ವಿಚಾರಕ್ಕೆ ಭಾರತಕ್ಕೆ ಬರುತ್ತಿದ್ದು ಪಾಕ್ ಪ್ರಜೆಗಳಿಗೆ ಪ್ರತಿಕೂಲ ಪರಿಣಾಮವಾಗಲಿದೆ.
ದ್ವಿಪಕ್ಷೀಯ ಸಂಬಂಧಗಳು ಮತ್ತು ಸಂಸ್ಕೃತಿ ವಿನಿಮಯದಂತ ವಿಚಾರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ.
ಏಪ್ರಿಲ್ 27 ರಿಂದ ಜಾರಿಗೆ ಬರುವಂತೆ ಭಾರತವು ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ಎಲ್ಲಾ ಮಾನ್ಯ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಪಾಕಿಸ್ತಾನದ ಪ್ರಜೆಗಳಿಗೆ ನೀಡಲಾಗಿರುವ ವೈದ್ಯಕೀಯ ವೀಸಾಗಳು ಏಪ್ರಿಲ್ 29 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದೂ ಅದು ಹೇಳಿದೆ.
ವೀಸಾ ಅವಧಿ ಮುಗಿಯುವ ಮೊದಲು ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನದ ಪ್ರಜೆಗಳು ದೇಶವನ್ನು ತೊರೆಯಬೇಕು ಎಂದು ಎಂಇಎ ತಿಳಿಸಿದೆ. ಅಲ್ಲದೇ ಭಾರತೀಯ ಪ್ರಜೆಗಳು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಮತ್ತು ಪ್ರಸ್ತುತ ಆ ದೇಶದಲ್ಲಿ ನೆಲೆಸಿರುವವರು ಆದಷ್ಟು ಬೇಗ ಭಾರತಕ್ಕೆ ಮರಳುವಂತೆಯೂ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.