ADVERTISEMENT

Pahalgam Terror Attack: ಪತಿಗೆ ಹುತಾತ್ಮ ಸ್ಥಾನಮಾನ ನೀಡಲು ಶುಭಂ ಪತ್ನಿ ಮನವಿ

ಪಿಟಿಐ
Published 27 ಏಪ್ರಿಲ್ 2025, 5:18 IST
Last Updated 27 ಏಪ್ರಿಲ್ 2025, 5:18 IST
<div class="paragraphs"><p>ಶುಭಂ ದ್ವಿವೇದಿ ಪತ್ನಿ</p></div>

ಶುಭಂ ದ್ವಿವೇದಿ ಪತ್ನಿ

   

(ಪಿಟಿಐ ಚಿತ್ರ)

ಕಾನ್ಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ತನ್ನ ಪತಿ ಶುಭಂ ದ್ವಿವೇದಿ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ನಿ ಆಶಾನ್ಯ ಮನವಿ ಮಾಡಿದ್ದಾರೆ.

ADVERTISEMENT

ಕಾಶ್ಮೀರದ ಪಹಲ್ಗಾಮ್‌ ಪ್ರವಾಸ ಕೈಗೊಂಡಿದ್ದ ಉದ್ಯಮಿ ಶುಭಂ ದ್ವಿವೇದಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಮೊದಲು ಧರ್ಮವನ್ನು ಕೇಳಿದ್ದರು.

'ನನ್ನ ಪತಿ ಧೀರವಾಗಿ ಪ್ರಾಣ ತ್ಯಾಗ ಮಾಡಿದ್ದು, ಹಲವರ ಜೀವ ಉಳಿಸಲು ಕಾರಣರಾಗಿದ್ದಾರೆ. ಉಗ್ರರ ಮೊದಲ ಗುಂಡು ನನ್ನ ಪತಿಗೆ ತಗುಲಿತು. ಭಯೋತ್ಪಾದಕರು ಹಿಂದೂ ಅಥವಾ ಮುಸ್ಲಿಂ ಎಂದು ಕೇಳಲು ಸಮಯ ತೆಗೆದುಕೊಂಡರು. ಆ ವೇಳೆ ಅಲ್ಲಿಂದ ಹಲವರು ಓಡಿಹೋಗಿ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಯಿತು' ಎಂದು ಆಶಾನ್ಯ ಹೇಳಿದ್ದಾರೆ.

'ನಮ್ಮ ಬಳಿ ಬಂದ ಜನರು (ಭಯೋತ್ಪಾದಕರು) ಹಿಂದೂ ಅಥವಾ ಮುಸ್ಲಿಮರೇ ಎಂದು ಕೇಳಿದರು. ಅವರು ತಮಾಷೆ ಮಾಡುತ್ತಿದ್ದರು ಎಂದು ಅಂದುಕೊಂಡಿದ್ದೆ. ನಾನು ನಗುತ್ತಾ ಏನು ಎಂದು ಕೇಳಿದೆ. ತಕ್ಷಣವೇ ಪ್ರಶ್ನೆಯನ್ನು ಪುನರಾವರ್ತಿಸಿದರು. ನಾವು ಹಿಂದೂಗಳು ಎಂದು ಉತ್ತರಿಸಿದಾಕ್ಷಣ ಗುಂಡು ಹೊಡೆಯಲಾಯಿತು. ಅಲ್ಲಿಗೆ ಎಲ್ಲವೂ ಮುಗಿದು ಹೋಗಿತ್ತು. ಶುಭಂ ಮುಖದಲ್ಲಿ ರಕ್ತ ಮಡುಗಟ್ಟಿತ್ತು. ಏನಾಯಿತು ಎಂದು ಅರಿವಾಗಲಿಲ್ಲ' ಎಂದು ಭಯಾನಕ ಸನ್ನಿವೇಶವನ್ನು ವಿವರಿಸಿದ್ದಾರೆ.

'ನನ್ನನ್ನು ಗುಂಡಿಕ್ಕಿ ಹತ್ಯೆ ಮಾಡುವಂತೆ ಬೇಡಿಕೊಂಡೆ. ಆದರೆ ಉಗ್ರರು ನಿರಾಕರಿಸಿದರು. ಸರ್ಕಾರಕ್ಕೆ ಹೋಗಿ ನಾವೇನು ಮಾಡಿದೆ ಎಂದು ಹೇಳಲು ನನ್ನನ್ನು ಬದುಕುಳಿಸಿದರು' ಎಂದು ಹೇಳಿದ್ದಾರೆ.

'ಸರ್ಕಾರ ನನ್ನ ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕು. ಅದನ್ನು ಬಿಟ್ಟರೆ ಬೇರೇನೂ ಬೇಡ. ನನ್ನ ಬೇಡಿಕೆ ಈಡೇರಿದರೆ ಬದುಕಲು ಕಾರಣ ಇರುತ್ತದೆ' ಎಂದು ಹೇಳಿದ್ದಾರೆ.

'ಧರ್ಮದ ಹೆಸರಿನಲ್ಲಿ ಗುಂಡು ಹಾರಿಸುವ ಯಾರೇ ಆದರೂ ಅಂತವರನ್ನು ಹತ್ಯೆ ಮಾಡಬೇಕು' ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.

ಶುಭಂ ದ್ವಿವೇದಿ ಅವರ ಅಂತಿಸಂಸ್ಕಾರವನ್ನು ಗುರುವಾರ ನೆರವೇರಿಸಲಾಯಿತು.

ಶುಭಂ ಅವರ ತಂದೆ ಸಂಜಯ್ ದ್ವಿವೇದಿ ಸಹ ಆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಸುಮಾರು ಒಂದು ತಾಸಿನ ಬಳಿಕವಷ್ಟೇ ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಹೇಳಿದ್ದಾರೆ.

31 ವರ್ಷದ ಶುಭಂ ಸಿಮೆಂಟ್‌ ಮಾರಾಟದ ವ್ಯವಹಾರ ನಡೆಸುತ್ತಿದ್ದರು. ಫೆಬ್ರುವರಿ 12ರಂದು ಮದುವೆಯಾಗಿತ್ತು. ಪತ್ನಿ ಹಾಗೂ ಕುಟುಂಬದ ಇತರ 9 ಸದಸ್ಯರೊಂದಿಗೆ ಅವರು ಏಪ್ರಿಲ್ 16ರಂದು ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.