ADVERTISEMENT

ಪಹಲ್ಗಾಮ್‌: TRF ಪಾತ್ರದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ವರದಿಯಲ್ಲಿ ಉಲ್ಲೇಖ

ಪಿಟಿಐ
Published 30 ಜುಲೈ 2025, 13:36 IST
Last Updated 30 ಜುಲೈ 2025, 13:36 IST
   

ನವದೆಹಲಿ: ಪಹಲ್ಗಾಮ್‌ ದಾಳಿಯಲ್ಲಿ ಲಷ್ಕರ್‌–ಎ–ತಯಬಾದ (ಎಲ್‌ಇಟಿ) ಅಂಗಸಂಸ್ಥೆ ‘ದಿ ರೆಸಿಸ್ಟನ್ಸ್ ಫ್ರಂಟ್‌’ (ಟಿಆರ್‌ಎಫ್‌) ಪಾತ್ರದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (ಯುಎನ್‌ಎಸ್‌ಸಿ) ತನ್ನ ವರದಿಯಲ್ಲಿ ಇದೇ ಮೊದಲ ಬಾರಿಗೆ ಉಲ್ಲೇಖಿಸಿದೆ.‌‌

ಎಲ್‌ಇಟಿ ಬೆಂಬಲವಿಲ್ಲದೆ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯಲು ಸಾಧ್ಯವಿಲ್ಲ. ಎಲ್‌ಇಟಿ ಮತ್ತು ಟಿಆರ್‌ಎಫ್ ನಡುವೆ ಸಂಬಂಧವಿದೆ ಎಂದು ಮಂಡಳಿಯ ಸದಸ್ಯ ರಾಷ್ಟ್ರವೊಂದು ಹೇಳಿತ್ತು.

ಈ ಸಂದರ್ಭದಲ್ಲಿ ಮತ್ತೊಂದು ಸದಸ್ಯ ರಾಷ್ಟ್ರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಎಲ್‌ಇಟಿ ಅಸ್ತಿತ್ವದಲ್ಲಿಯೇ ಇಲ್ಲ ಎಂದು ತಿಳಿಸಿತು ಎಂದು ಯುಎನ್‌ಎಸ್‌ಸಿ ಮೇಲ್ವಿಚಾರಣೆ ತಂಡ ವರದಿಯಲ್ಲಿ ಉಲ್ಲೇಖಿಸಿದೆ.

ADVERTISEMENT

ಪಹಲ್ಗಾಮ್‌ನಲ್ಲಿ ಐವರು ಉಗ್ರರು ದಾಳಿ ನಡೆಸಿದ್ದು, 26 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಹೊಣೆಯನ್ನು ಟಿಆರ್‌ಎಫ್‌ ಹೊತ್ತುಕೊಂಡಿದ್ದು, ಈ ಕುರಿತು ಎರಡು ಬಾರಿ ಹೇಳಿಕೊಂಡಿದೆ. ಅಲ್ಲದೇ, ದಾಳಿ ನಡೆಸಿದ ಸ್ಥಳದ ಚಿತ್ರವನ್ನು ಕೂಡ ಪ್ರಕಟಿಸಿದೆ ಎಂದೂ ಮಂಡಳಿ ಹೇಳಿದೆ. ನಿರ್ಬಂಧಗಳನ್ನು ಹೇರುವ ಪ್ರಕ್ರಿಯೆ ಕುರಿತು ಮೇಲ್ವಿಚಾರಣೆ ನಡೆಸುವ ಮಂಡಳಿಯ ತಂಡವು (ಅನಲಿಟಿಕಲ್ ಸಪೋರ್ಟ್‌ ಆ್ಯಂಡ್ ಸ್ಯಾಂಕ್ಷನ್ಸ್ ಮಾನಟರಿಂಗ್ ಟೀಮ್) ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.

ಇದರಿಂದ ಪಾಕಿಸ್ತಾನ ಬೆಂಬಲಿತ ಗಡಿ ಭಯೋತ್ಪಾದನೆ ವಿರುದ್ಧದ ಭಾರತದ ರಾಜತಾಂತ್ರಿಕ ಹೋರಾಟವು ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. 

ಉಗ್ರ ಸಂಘಟನೆಗಳಾದ ಐಎಸ್‌ಐಎಲ್, ಅಲ್‌ ಖೈದಾ ಹಾಗೂ ಇವುಗಳ ಜೊತೆ ನಂಟು ಹೊಂದಿರುವ ವ್ಯಕ್ತಿಗಳು ಹಾಗೂ ಇತರ ಸಂಘಟನೆಗಳ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.