ಕಾನ್ಪುರದ ಶುಭಂ ದ್ವಿವೇದಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಶೋಕಸಾಗರದಲ್ಲಿ ಕುಟುಂಬ ಸದಸ್ಯರು
ಪಿಟಿಐ ಚಿತ್ರ
ಪುಣೆ: ‘ಪಹಲ್ಗಾಮ್‌ನಲ್ಲಿ ಸುಂದರ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಭಯೋತ್ಪಾದಕರು ಎದುರಾಗುತ್ತಿದ್ದಂತೆ, ನನ್ನನ್ನೂ ಒಳಗೊಂಡಂತೆ ಕೆಲ ಮಹಿಳೆಯರು ಹಣೆಯಲ್ಲಿದ್ದ ಬಿಂದಿ ತೆಗೆದು, ‘ಅಲ್ಲಾಹು ಅಕ್ಬರ್’ ಎಂದೆವು. ಹೀಗಿದ್ದರೂ ಅವರ ಮನಸ್ಸು ಕರಗಲಿಲ್ಲ. ಕಣ್ಣೆದುರೇ ಪತಿ ಮತ್ತು ಅವರ ಸ್ನೇಹಿತನನ್ನು ಗುಂಡಿಕ್ಕಿ ಕೊಂದರು’ ಎಂದು ಪುಣೆಯ ಸಂಗೀತಾ ಗನ್ಬೋಟೆ ಗದ್ಗದಿತರಾದರು.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ನಲ್ಲಿ ಪ್ರವಾಸಿಗರನ್ನೇ ಗುರಿಯಾಗಿಸಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಂಗೀತಾ ಅವರ ಪತಿ ಕೌಸ್ತುಭ್ ಗನ್ಬೋಟೆ ಸೇರಿದಂತೆ 26 ಜನ ಅಮಾಯಕರು ಮೃತಪಟ್ಟು, ಹಲವರು ಗಾಯಗೊಂಡರು. ಅಂದಿನ ಆ ಕರಾಳ ಸನ್ನಿವೇಶವನ್ನು ಸಂಗೀತಾ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.
‘ಉದ್ಯಾನದಲ್ಲಿದ್ದವರ ಬಳಿ ಬಂದೂಕು ಹಿಡಿದು ಬಂದ ಭಯೋತ್ಪಾದಕರು ‘ಆಝಾನ್’ ಪಠಿಸಲು ಹೇಳಿದರು. ಆದರೆ ಧರ್ಮಮವನ್ನು ಮರೆಮಾಚುವ ನಮ್ಮ ಪ್ರಯತ್ನವೆಲ್ಲಾ ವಿಫಲವಾದವು. ನಾವು ಅತ್ತರೂ, ಕರೆದರೂ ಅವರ ಹೃದಯ ಕರಗಿಲ್ಲ. ನಮ್ಮವರ ಮೇಲೆ ಗುಂಡು ಹಾರಿಸಿಯೇಬಿಟ್ಟರು’ ಎಂದಿದ್ದಾರೆ.
‘ಕೌಸ್ತುಭ್ ಜತೆ ಅವರ ಬಾಲ್ಯದ ಗೆಳೆಯ ಸಂತೋಷ್ ಜಗದಾಳೆ ಅವರೂ ಪ್ರಾಣ ಕಳೆದುಕೊಂಡಿದ್ದಾರೆ. ಇವರೊಂದಿಗೆ ಸ್ಥಳೀಯ ವ್ಯಕ್ತಿಯನ್ನೂ ಅವರು ಗುಂಡಿಕ್ಕಿದರು. ಇದಕ್ಕೂ ಮೊದಲು ಇಬ್ಬರಿಗೂ ಪ್ಯಾಂಟ್ ತೆಗೆಯಲು ಹೇಳಿದ್ದರು. ನಾಲ್ಕರಿಂದ ಐದು ಜನರಿದ್ದ ಭಯೋತ್ಪಾದಕರು ಎಲ್ಲರನ್ನೂ ಹಿಂದೂಗಳೇ ಮುಸ್ಲಲ್ಮಾನರೇ ಎಂದು ಕೇಳುತ್ತಿದ್ದರು. ಮುಸಲ್ಮಾನರಾದರೆ ಕಲ್ಮಾ ಪಠಿಸು ಎನ್ನುತ್ತಿದ್ದರು. ಆಗಲೇ ನಾವೆಲ್ಲರೂ ಹಣೆಯಲ್ಲಿದ್ದ ಬಿಂದಿ ತೆಗೆದು, ಅಲ್ಲಾಹು ಅಕ್ಬರ್ ಎಂದು ಪಠಿಸಲಾರಂಭಿಸಿದೆವು. ಹೀಗಿದ್ದರೂ ಅವರು ಪುರುಷರ ತಲೆ, ಕಣ್ಣು ಮತ್ತು ಎದೆಗೆ ಬಂದೂಕು ಇಟ್ಟು ಗುಂಡು ಹಾರಿಸಿದರು. ಬಂದೂಕು ಹಿಡಿದಿದ್ದ ಭಯೋತ್ಪಾದಕರು ನಮ್ಮನ್ನು ಸುತ್ತುವರಿದ್ದರು. ನೆರವಿಗಾಗಿ ಅರಚುವುದಕ್ಕೂ ಸಾಧ್ಯವಾಗಲಿಲ್ಲ’ ಎಂದು ಜಗದಾಳೆ ಪುತ್ರಿ ಅಸವಾರಿ ವಿವರಿಸಿ ಕಣ್ಣೀರಾದರು.
‘ರಕ್ತದ ಮಡುವಿನಲ್ಲಿದ್ದ ಗನ್ಬೋಟೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 10ರವರೆಗೂ ಅವರು ಬದುಕಿದ್ದಾರೆ ಎಂದೇ ಹೇಳಲಾಗಿತ್ತು. ನಂತರ ಮೃತಪಟ್ಟಿದ್ದಾರೆ ಎಂದು ಹೇಳಿದರು. ನಿಜಕ್ಕೂ ನಾವೆಲ್ಲರೂ ಅಸಹಾಯಕರಾಗಿದ್ದೆವು’ ಎಂದು ಜಗದಾಳೆ ಅವರ ಪತ್ನಿ ಪ್ರತಿಭಾ ವಿವರಿಸಿದರು.
‘ಆಘಾತದಿಂದ ಮಕ್ಕಳು ಅಳುತ್ತಿದ್ದವು. ಹಾದಿಯಲ್ಲಿ ನಡೆದುಕೊಂಡು ಬರುವುದೇ ಅಸಾಧ್ಯವಾಗಿತ್ತು. ಕೆಲವೆಡೆ ಬಿದ್ದಿದ್ಧೇವೆ. ಇಂಥ ದುರ್ಘಟನೆ ಭವಿಷ್ಯದಲ್ಲಿ ಯಾರಿಗೂ ಆಗಬಾರದು. ದಯವಿಟ್ಟು ಈ ಪ್ರದೇಶವನ್ನು ಪ್ರವಾಸಿಗರಿಗೆ ಮುಚ್ಚಿಬಿಡಿ. ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ ಎಂದಷ್ಟೇ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ. ಪತಿಯನ್ನು ಕಳೆದುಕೊಂಡ ನಾನು, ತಂದೆಯನ್ನು ಕಳೆದುಕೊಂಡ ಪುತ್ರಿ ಮುಂದೇನು ಮಾಡಬೇಕೋ ತಿಳಿಯದಾಗಿದೆ’ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.