ಉಗ್ರರ ದಾಳಿಯ ಬಳಿಕ ಪಹಲ್ಗಾಮ್‌ಗೆ ಮತ್ತೆ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ
ಪಿಟಿಐ ಚಿತ್ರ
ಶ್ರೀನಗರ: ಉಗ್ರರ ಭೀಕರ ದಾಳಿಯ ಎರಡು ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮತ್ತೆ ಪ್ರವಾಸಿಗರ ಕಲರವ ಆರಂಭವಾಗಿದೆ. ಹೋಟೆಲ್‌ಗಳು ಬುಕಿಂಗ್ ಆಗುತ್ತಿದ್ದು, ಭಯವನ್ನೂ ಮೀರಿಸುವಂತ ಭರವಸೆ ಅಲ್ಲಿಯ ಜನರಲ್ಲಿ ಮೂಡಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ 26 ಜನ ಮೃತಪಟ್ಟಿದ್ದರು. ಇದಾದ ಬಳಿಕ ಕಾಶ್ಮೀರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಏಕಾಏಕಿ ಕುಸಿತ ಕಂಡಿತ್ತು. ಮುಂಗಡವಾಗಿ ಬುಕಿಂಗ್ ಮಾಡಿದ್ದ ಶೇ 90ರಷ್ಟು ಪ್ರವಾಸಿಗರು ಭೇಟಿಗೆ ಹಿಂದೇಟು ಹಾಕಿದ್ದರು ಎಂದು ವರದಿಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, 2024ರಲ್ಲಿ 35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2025ರ ಆರಂಭದ ಮೂರು ತಿಂಗಳಲ್ಲೇ 5 ಲಕ್ಷ ಜನ ಭೇಟಿ ನೀಡಿದ್ದರು, ಈ ಅವಧಿಯನ್ನು ಸಾಮಾನ್ಯವಾಗಿ ಕಡಿಮೆ ಪ್ರವಾಸಿಗರು ಬರುವ ಸಮಯ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಸ್ಥಳೀಯ ಹೋಟೆಲ್‌ನಲ್ಲಿ ಕೆಲಸ ಮಾಡುವ ತಾರಿಕ್ ಅಹಮದ್ ಎನ್ನುವವರು ದಾಳಿ ನಡೆದ ದಿನವನ್ನು ನೆನೆಸಿಕೊಂಡು, ‘ಜನರು ಭಯಗೊಂಡಿದ್ದರು, ಎಲ್ಲರಲ್ಲೂ ಭೀತಿ ಕಾಣುತ್ತಿತ್ತು, ರಾತ್ರೋರಾತ್ರಿ ಜನರು ಕಾಶ್ಮಿರ ತೊರೆದರು, ಎಲ್ಲವನ್ನೂ ಕಳೆದುಕೊಂಡೆವು ಎನ್ನುವ ಭಾವನೆ ಮೂಡಿತ್ತು’ ಎಂದಿದ್ದಾರೆ.
ಆದರೆ ಕೆಲವು ವಾರ ಕಳೆದ ಮೇಲೆ ಪ್ರವಾಸಿಗರು ಯಾವುದೇ ಭಯವಿಲ್ಲದೆ ಮತ್ತೆ ಬರುತ್ತಿದ್ದರು. ಇದನ್ನು ಕಂಡು ಸ್ಥಳೀಯ ಉದ್ಯಮಿಗಳು ನಿಟ್ಟುಸಿರುಬಿಟ್ಟಿದ್ದಾರೆ.
‘ನಾವು ಮತ್ತೆ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ, ಉತ್ಸಾಹವನ್ನು ಗುಂಡಿಕ್ಕಿ ಕೊಲ್ಲುವಂತೆ ಮಾಡಲು ನಾವು ಬಿಡುವುದಿಲ್ಲ’ ಎಂದು ಸ್ಥಳೀಯರಾದ ಶಬೀರ್ ಲೋನ್ ಹೇಳಿದ್ದಾರೆ.
ಪ್ರವಾಸಿಗರು ಮತ್ತೆ ಬರುತ್ತಿರುವುದು, ಕಾಶ್ಮೀರ ಇನ್ನೂ ಪ್ರವಾಸಿ ತಾಣವಾಗಿ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.
‘ನಾವು ದಿನಕಳೆದಂತೆ ಮತ್ತೆ ನಂಬಿಕೆಯನ್ನು ಗಳಿಸುತ್ತಿದ್ದೇವೆ. ಮುಂಬರುವ ಅಮರನಾಥ ಯಾತ್ರೆ ಪ್ರವಾಸೋದ್ಯಮಕ್ಕೆ ಚೇತರಿಸಿಕೊಳ್ಳಲು ಇನ್ನಷ್ಟು ಪುಷ್ಟಿನೀಡಲಿದೆ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ದೆಹಲಿಯಿಂದ ಪಹಲ್ಗಾಮ್‌ಗೆ ಭೇಟಿ ನೀಡಿದ್ದ ರೇಖಾ ಶರ್ಮಾ ಎನ್ನುವವರು ಮಾತನಾಡಿ, ‘ಆರಂಭದಲ್ಲಿ ಕಾಶ್ಮೀರಕ್ಕೆ ಬರಲು ಹಿಂಜರಿಕೆ ಕಾಡಿತ್ತು, ಆದರೆ ಇಲ್ಲಿ ಬಂದ ಮೇಲೆ ಸುಂದರ ಸ್ಥಳಗಳನ್ನು ನೋಡಲು ಸಾಧ್ಯವಾಯಿತು, ನಾವು ಸಂಪೂರ್ಣ ಸುರಕ್ಷಿತರಾಗಿದ್ದೇವೆ ಎನ್ನುವ ಭಾವನೆಯಿದೆ’ ಎಂದಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಸುಧಾರಿತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸೂಕ್ಷ್ಮ ವಲಯಗಳಲ್ಲಿ ಭದ್ರತಾ ಪಡೆಗಳ ನಿಯೋಜನೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೂಡ ಜನರಲ್ಲಿ ಸುರಕ್ಷತೆಯ ಬಗ್ಗೆ ಭರವಸೆಯನ್ನು ಮೂಡಿಸುತ್ತಿದೆ, ಇದರ ಪರಿಣಾಮ ಪ್ರವಾಸಿಗರೂ ಧೈರ್ಯವಾಗಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.