ADVERTISEMENT

2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ್ದ ಪಾಕ್ ಡ್ರೋನ್ ಚೀನಾದಿಂದ ಬಂದಿದ್ದು!

ಏಜೆನ್ಸೀಸ್
Published 1 ಮಾರ್ಚ್ 2023, 10:23 IST
Last Updated 1 ಮಾರ್ಚ್ 2023, 10:23 IST
   

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಂಜಾಬ್‌ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆಗಳು(ಬಿಎಸ್‌ಎಫ್‌) ಹೊಡೆದುರುಳಿಸಿದ್ದ ಪಾಕಿಸ್ತಾನದ ಡ್ರೋನ್‌ ಚೀನಾದಿಂದ ಬಂದಿದ್ದು ಬಿಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

ಬಿಎಸ್‌ಎಫ್‌ ಹೊಡೆದುರುಳಿಸಿದ್ದ ಡ್ರೋನ್‌ನ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಭಾರತ-ಪಾಕ್ ಗಡಿಯಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಈ ಡ್ರೋನ್‌ ಬಳಕೆಯಾಗಿತ್ತು. ಅದಕ್ಕೂ ಮುನ್ನ ಚೀನಾದ ಕೆಲವು ಭಾಗಗಳಲ್ಲಿ ಮತ್ತು ನಂತರ ಪಾಕಿಸ್ತಾನದಲ್ಲಿ ಈ ಡ್ರೋನ್‌ ಹಾರಿಸಲಾಗಿದೆ ಎಂಬುದು ಡ್ರೋನ್‌ನ ವಿಧಿವಿಜ್ಞಾನ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜುಲೈ 11, 2022 ರಂದು ಚೀನಾದ ಶಾಂಘೈನ ಫೆಂಗ್ ಕ್ಸಿಯಾನ್ ಜಿಲ್ಲೆಯಲ್ಲಿ ಈ ಡ್ರೋನ್‌ ಹಾರಿಸಲಾಗಿದೆ. ಬಳಿಕ ಸೆಪ್ಟೆಂಬರ್ 24 ಮತ್ತು ಡಿಸೆಂಬರ್ 25,2022 ರ ನಡುವೆ ಅದನ್ನು 28 ಬಾರಿ ಪಾಕಿಸ್ತಾನದ ಖನೇವಾಲ್‌ ಭಾಗದಲ್ಲಿ ಹಾರಿಸಲಾಗಿದೆ ಎಂಬುದು ವಿಧಿ ವಿಜ್ಞಾನ ವಿಶ್ಲೇಷಣೆಯಿಂದ ತಿಳಿದುಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

2019 ರಿಂದ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಪಾಕಿಸ್ತಾನ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದೆ. ಸಾಮಾನ್ಯವಾಗಿ ಡ್ರೋನ್‌ಗಳಿಗೆ ಹೆರಾಯಿನ್ ಪ್ಯಾಕೆಟ್‌ಗಳನ್ನು ಲಗತ್ತಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಚೀನಾದ ಪಿಸ್ತೂಲ್‌ಗಳು ಕೂಡ ಹೀಗೆ ಹೊಡೆದುರುಳಿಸಿದ ಡ್ರೋನ್‌ಗಳಲ್ಲಿ ಸಿಕ್ಕಿದೆ. ಭಾರತ-ಪಾಕ್ ಗಡಿಯಲ್ಲದೇ, ರಾಜಸ್ಥಾನದ ಗಡಿಯ ಬಳಿಯೂ ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಬಿಎಸ್‌ಎಫ್‌ ಕಳೆದ ಎರಡು ವಾರಗಳಲ್ಲಿ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. 2022ರಲ್ಲಿ ಭಾರತದತ್ತ ಹಾರುತ್ತಿದ್ದ ಕನಿಷ್ಠ 22 ಡ್ರೋನ್‌ಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.