ನವದೆಹಲಿ: ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ಬಳಿಕವಷ್ಟೇ ‘ಆಪರೇಷನ್ ಸಿಂಧೂರ’ದ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸಂಸದೀಯ ಸಮಿತಿಯೊಂದಕ್ಕೆ ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ತಾವು ಹಿಂದೆ ನೀಡಿದ್ದ ಹೇಳಿಕೆಯನ್ನು ‘ತಿರುಚುವ’ ಮತ್ತು ‘ತಪ್ಪಾಗಿ ನಿರೂಪಿಸುವ’ ಕೆಲಸ ನಡೆದಿತ್ತು ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಲಹಾ ಸಮಿತಿಯ ಸಭೆಯಲ್ಲಿ ಸಂಸದರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿ ಪ್ರಚಾರ ಮಾಡಲಾಗಿದೆ. ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು ಎಂದು ನಾನು ಹೇಳಿಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಕದನ ವಿರಾಮ ನಿರ್ಧಾರದಲ್ಲಿ ಅಮೆರಿಕದ ಯಾವುದೇ ಹಸ್ತಕ್ಷೇಪ ಇಲ್ಲ. ಪಾಕಿಸ್ತಾನದಿಂದ ಕೋರಿಕೆ ಬಂದ ಬಳಿಕ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ಮಾತುಕತೆ ನಂತರ ಒಪ್ಪಂದಕ್ಕೆ ಬರಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆ ಮುಕ್ತ ವ್ಯಾಪಾರ: ‘ಪಾಕಿಸ್ತಾನದಲ್ಲಿ ಭಯೋತ್ಪಾದನೆಯು ಮುಕ್ತ ವ್ಯಾಪಾರವಾಗಿದೆ. ಅಲ್ಲಿನ ಮಿಲಿಟರಿ ಮತ್ತು ಆಡಳಿತವು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವ ಜೊತೆಗೆ ಸಂಘಟನೆಗೂ ಬಲ ತುಂಬುತ್ತಿವೆ’ ಎಂದು ಜೈಶಂಕರ್ ಆರೋಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ನಡೆದ ಸಂಘರ್ಷದ ಸಮಯದಲ್ಲಿ, ಎರಡೂ ರಾಷ್ಟ್ರಗಳು ಅಣ್ವಸ್ತ್ರ ಬಳಸುವಿಕೆಯಿಂದ ಬಹಳ ದೂರದಲ್ಲಿದ್ದವು ಎಂದು ಜರ್ಮನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಭಾಗದ ಸಕಲ ವಿದ್ಯಮಾನಕ್ಕೂ ಅಣ್ವಸ್ತ್ರದ ನಂಟು ಬೆಸೆಯುವ ಪ್ರವೃತ್ತಿ ಪಶ್ಚಿಮದ್ದಾಗಿದೆ’ ಎಂದು ತಿಳಿಸಿದ್ದಾರೆ.
‘ನಿಮ್ಮ ಪ್ರಶ್ನೆಯಿಂದ ಆಶ್ಚರ್ಯವಾಗಿದೆ. ಅಣ್ವಸ್ತ್ರದಿಂದ ನಾವು ತುಂಬಾ ದೂರವಿದ್ದೇವೆ. ಆದರೆ ಪಶ್ಚಿಮವು ಇಂತಹ ಹೇಳಿಕೆ ನೀಡುವುದಲ್ಲದೆ, ಭಯೋತ್ಪಾದನೆಯಂತಹ ಭಯಾನಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.