ADVERTISEMENT

ಅಮೆರಿಕ ನೆಲದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಭಾರತ ಎದಿರೇಟು

ಅರ್ಧ ಜಗತ್ತನ್ನೇ ನಾಶ ಮಾಡುತ್ತೇವೆ: ಪಾಕ್‌ ಸೇನಾ ಮುಖ್ಯಸ್ಥ ಮುನೀರ್ 

ಪಿಟಿಐ
ರಾಯಿಟರ್ಸ್
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
ಆಸಿಮ್‌ ಮುನೀರ್
ಆಸಿಮ್‌ ಮುನೀರ್   

ನವದೆಹಲಿ/ ನ್ಯೂಯಾರ್ಕ್: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಸಿಮ್ ಮುನೀರ್‌ ಅವರು ಅಮೆರಿಕದ ನೆಲದಲ್ಲಿ ನಿಂತು, ಭಾರತದ ವಿರುದ್ಧ ಅಣ್ವಸ್ತ್ರ ಬಳಕೆಯ ಬೆದರಿಕೆಯೊಡಿದ್ದಾರೆ. ‘ಅಣ್ವಸ್ತ್ರ ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ’ ಎನ್ನುವ ಮೂಲಕ ಭಾರತ ಅದೇ ಧಾಟಿಯಲ್ಲಿ ತಿರುಗೇಟು ನೀಡಿದೆ.

ಫ್ಲಾರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಆತಂಕ ಎದುರಾದರೆ ಅಣ್ವಸ್ತ್ರ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.

‘ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಅನುಮಾನಗಳನ್ನು ಮುನೀರ್‌ ಹೇಳಿಕೆ ಇನ್ನಷ್ಟು ಬಲಪಡಿಸಿದೆ. ಅಲ್ಲಿನ ಸೇನೆಯು ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸಿದೆ’ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. 

ADVERTISEMENT

ನೆರೆಯ ದೇಶವು ‘ಬೇಜವಾಬ್ದಾರಿತನದ ಅಣ್ವಸ್ತ್ರ ರಾಷ್ಟ್ರ’ವಾಗಿದೆ ಮತ್ತು ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸೇರುವ ಅಪಾಯವಿದೆ ಎಂಬುದನ್ನು ಈ ಬೆದರಿಕೆಯು ತೋರಿಸಿದೆ ಎಂದು ಹೇಳಿದೆ.

‘ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆ ಪಾಕಿಸ್ತಾನವು ಅನುಸರಿಸಿಕೊಂಡು ಬರುತ್ತಿರುವ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಅಮೆರಿಕವು ಪಾಕಿಸ್ತಾನ ಸೇನೆಯನ್ನು ಬೆಂಬಲಿಸಿದಾಗಲೆಲ್ಲಾ ಅವರು ತಮ್ಮ ಆಕ್ರಮಣಶೀಲತೆಯ ನೈಜ ಬಣ್ಣವನ್ನು ಹೊರಹಾಕುತ್ತಾರೆ’ ಎಂದೂ ಭಾರತ ಪ್ರತಿಕ್ರಿಯಿಸಿದೆ. 

ಭಾರತವು ಅಣ್ವಸ್ತ್ರ ಬೆದರಿಕೆಗೆ ಮಣಿಯುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಗೆಳೆಯನಾಗಿರುವ ಮೂರನೇ ರಾಷ್ಟ್ರವೊಂದರ ನೆಲದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂಬುದು ವಿಷಾದಕರ ಸಂಗತಿ ಎಂದು ಅಮೆರಿಕಕ್ಕೆ ಸ್ಪಷ್ಟ ಸಂದೇಶದಲ್ಲಿ ತಿಳಿಸಿದೆ.

ಮುನೀರ್‌ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸುತ್ತದೆ. ಅಮೆರಿಕವು ಅಂತಹ ವ್ಯಕ್ತಿಗೆ ವಿಶೇಷ ಆದರಾತಿಥ್ಯ ನೀಡುತ್ತಿರುವುದು ವಿಚಿತ್ರ ಎನಿಸುತ್ತದೆ.
ಜೈರಾಮ್‌ ರಮೇಶ್ ಕಾಂಗ್ರೆಸ್‌ ಮುಖಂಡ
ಅಣ್ವಸ್ತ್ರ ಬಲ ತೋರಿಸಿ ಬೆದರಿಕೆಯೊಡ್ಡುವುದನ್ನೇ ಪಾಕಿಸ್ತಾನ ತನ್ನ ಕಾಯಕವನ್ನಾಗಿಸಿಕೊಂಡಿದೆ. ಇದು ಆ ದೇಶದ ಬೇಜವಾಬ್ದಾರಿತವನ್ನು ತೋರಿಸುತ್ತದೆ
ರಣಧೀರ್‌ ಜೈಸ್ವಾಲ್ ಎಂಇಎ ವಕ್ತಾರ

ಮುನೀರ್‌ ಹೇಳಿದ್ದೇನು?

  • ನಮ್ಮದು ಅಣ್ವಸ್ತ್ರ ಹೊಂದಿರುವ ರಾಷ್ಟ್ರ. ಒಂದು ವೇಳೆ ಯುದ್ಧ ನಡೆದು ನಾವು ನಾಶವಾಗುವುದು ಖಚಿತವಾದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ

  • ಭಾರತವು ಅಣೆಕಟ್ಟು ನಿರ್ಮಿಸಿ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆದರೆ ಆ ಅಣೆಕಟ್ಟನ್ನು ಧ್ವಂಸಗೊಳಿಸುತ್ತೇವೆ

  • ಸಿಂಧೂ ನದಿ ಭಾರತದ ಸ್ವತ್ತಲ್ಲ. ನದಿ ನೀರು ಹರಿಯುವುದನ್ನು ನಿಲ್ಲಿಸುವ ಭಾರತೀಯ ಯೋಜನೆಗಳನ್ನು ವಿಫಲಗೊಳಿಸಲು ಬೇಕಾದಷ್ಟು ಸಂಪನ್ಮೂಲ ನಮ್ಮಲ್ಲಿದೆ

‘ಕಾಶ್ಮೀರವು ಪಾಕ್‌ನ ಕಂಠನಾಳ’

‘ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಂಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು’ ಎಂಬ ಹೇಳಿಕೆಯನ್ನು ಆಸಿಮ್‌ ಮುನೀರ್‌ ಪುನರುಚ್ಚರಿಸಿದ್ದಾರೆ. ‘ಕಾಶ್ಮೀರವು ಭಾರತದ ಆಂತರಿಕ ವಿಚಾರ ಅಲ್ಲ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ವಿಷಯ’ ಎಂದೂ ಹೇಳಿದ್ದಾರೆ.

ಪಹಲ್ಗಾಮ್‌ ದಾಳಿಗೆ ಕೆಲವು ವಾರಗಳ ಮುನ್ನ ಮುನೀರ್‌ ಅವರು, ‘ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಮರೆಯಲು ಸಾಧ್ಯವಿಲ್ಲ. ಅದು ಪಾಕ್‌ ಪಾಲಿಗೆ ಕಂಠನಾಳವಿದ್ದಂತೆ’ ಎಂದಿದ್ದರು. ಅವರ ಹೇಳಿಕೆಗೆ ಭಾರತ ತಿರುಗೇಟು ನೀಡಿತ್ತು.

‘ವಿದೇಶದಲ್ಲಿರುವ ಜಾಗವೊಂದು ಕಂಠನಾಳವಾಗಲು ಹೇಗೆ ಸಾಧ್ಯ? ಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶ. ಪಾಕಿಸ್ತಾನದೊಂದಿಗಿನ ಅದರ ಏಕೈಕ ಸಂಬಂಧವೆಂದರೆ ಆ ದೇಶವು ಅಕ್ರಮವಾಗಿ ವಶದಲ್ಲಿರಿಸಿಕೊಂಡಿರುವ ಪ್ರದೇಶಗಳನ್ನು ಬಿಟ್ಟುಕೊಡುವುದು’ ಎಂದು ಎಂಇಎ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.