ಭಾರತ–ಪಾಕಿಸ್ತಾನ
– ಗೆಟ್ಟಿ ಚಿತ್ರ
ನವದೆಹಲಿ: ಅಮೆರಿಕದಲ್ಲಿ ಭಾರತದ ವಿರುದ್ಧ ಪರಮಾಣು ದಾಳಿ ಕುರಿತು ಬೆದರಿಕೆ ಹಾಕಿರುವ ಪಾಕಿಸ್ತಾನ ಸೇನಾಪಡೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್‌ಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಅಣ್ವಸ್ತ್ರ ಬೆದರಿಕೆ ಪಾಕಿಸ್ತಾನದ ತಂತ್ರವಾಗಿದೆ. ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತ ಮಣಿಯುವುದಿಲ್ಲ. ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಸ್ನೇಹಪರ ಮೂರನೇ ರಾಷ್ಟ್ರದಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಅಮೆರಿಕಕ್ಕೆ ನೀಡಿರುವ ಸಂದೇಶದಲ್ಲೂ ಸ್ಪಷ್ಟವಾಗಿ ತಿಳಿಸಿದೆ.
ಮುನೀರ್ ಹೇಳಿಕೆಯು ಪರಮಾಣು ಸಾಮರ್ಥ್ಯ ಹೊಂದಿರುವ ರಾಷ್ಟ್ರದ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ. ಅಂತಹ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ತಲುಪುದರ ಅಪಾಯವನ್ನು ಇದು ತೋರಿಸುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭವಿಷ್ಯದಲ್ಲಿ ಭಾರತದೊಂದಿಗಿನ ಯುದ್ಧದಲ್ಲಿ ಅಸ್ತಿತ್ವದ ಬೆದರಿಕೆ ಉಂಟಾದ್ದಲ್ಲಿ ಪರಮಾಣು ಅಸ್ತ್ರವನ್ನು ಪ್ರಯೋಗಿಸುವುದಾಗಿ ಅಮೆರಿಕ ಪ್ರವಾಸದಲ್ಲಿರುವ ಅಸೀಮ್ ಮುನೀರ್ ಬೆದರಿಕೆ ಹಾಕಿದ್ದರು.
ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆದರೆ ಭಾರತದ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿಯೂ ಅವರು ಹೇಳಿದ್ದರು.
ಪರಮಾಣು ಸಾಮರ್ಥ್ಯದ ರಾಷ್ಟ್ರ ನಮ್ಮದ್ದಾಗಿದೆ. ಒಂದು ವೇಳೆ ನಾವು ಸೋಲುವುದಾದರೆ ಜಗತ್ತಿನ ಅರ್ಧದಷ್ಟು ಭಾಗವನ್ನು ನಾಶಪಡಿಸಲಿದ್ದೇವೆ ಎಂದೂ ಬೆದರಿಕೆ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.