ಎಫ್–16 ಯುದ್ಧವಿಮಾನಗಳು
ರಾಯಿಟರ್ಸ್ ಸಂಗ್ರಹ ಚಿತ್ರ
ಮುಂಬೈ: ಪಾಕಿಸ್ತಾನವು ಅಮೆರಿಕ ಜೊತೆಗಿನ ಒಪ್ಪಂದ ಉಲ್ಲಂಘಿಸಿ ಎಫ್–16 ಯುದ್ಧವಿಮಾನಗಳನ್ನು ಬಳಕೆ ಮಾಡಿದೆ ಎಂದು ಹೇಳಿರುವ ಪ್ರಕಾಶ್ ಅಂಬೇಡ್ಕರ್, ಈ ವಿಚಾರವನ್ನು ಅಮೆರಿಕದೊಂದಿಗೆ ಚರ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತದ ವಿರುದ್ಧದ ಸಂಘರ್ಷದ ಸಂದರ್ಭದಲ್ಲಿ ಪಾಕ್ ವಾಯುಪಡೆಯು ಸೂಪರ್‌ಸಾನಿಕ್ ಮಲ್ಟಿರೋಲ್ ಫೈಟರ್ ವಿಮಾನ F-16 ಅನ್ನು ಬಳಸಿದೆ ಎಂದು ವರದಿಯಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ 'ವಂಚಿತ ಬಹುಜನ ಆಘಾಡಿ' ಪಕ್ಷದ ಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
'ಕೊನೇ ಕ್ಷಣದಲ್ಲಿ ಮಾತ್ರವೇ ಬಳಸಬೇಕು ಎಂಬ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ F-16 ಯುದ್ಧವಿಮಾನಗಳನ್ನು ಅಮೆರಿಕ ನೀಡಿದೆ. ಆ ಒಪ್ಪಂದದ ಪ್ರಕಾರ, F–16 ವಿಮಾನಗಳನ್ನು ಭಾರತ ವಿರುದ್ಧದ ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ಬಳಸುವಂತಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಲೋಕಸಭಾ ಸಂಸದರಾಗಿ ಎರಡು ಬಾರಿ ಮತ್ತು ರಾಜ್ಯಸಭೆ ಸದಸ್ಯರಾಗಿ ಒಮ್ಮೆ ಸಂಸತ್ ಪ್ರವೇಶಿಸಿರುವ ಪ್ರಕಾಶ್, 'ಪಾಕಿಸ್ತಾನವು ಭಾರತ ವಿರುದ್ಧದ ಕಾರ್ಯಾಚರಣೆಗೆ F–16 ಯುದ್ಧ ವಿಮಾನಗಳನ್ನು ಬಳಸಿದೆ. ಇದು, ಒಪ್ಪಂದದ ಘೋರ ಉಲ್ಲಂಘನೆಯಾಗಿದೆ' ಎಂದು ಉಲ್ಲೇಖಿಸಿದ್ದಾರೆ.
ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಒತ್ತಾಯಿಸಿರುವ ಪ್ರಕಾಶ್, 'ಪಾಕಿಸ್ತಾನ ಮತ್ತು ಅದರ ಕುತಂತ್ರಗಳನ್ನು ಜಗತ್ತಿನೆದುರು ಬಯಲು ಮಾಡಬೇಕು' ಎಂದು ಮನವಿ ಮಾಡಿದ್ದಾರೆ.
'ಪಾಕಿಸ್ತಾನವು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುತ್ತಿದೆ. ಭಾರತೀಯ ವಾಯುಪಡೆಯ ರಫೇಲ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಸಶಸ್ತ್ರ ಪಡೆಗಳ ಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಭಾರತವು, ಪಾಕಿಸ್ತಾನ ಸಂಸ್ಥೆಗಳು ಹರಡುತ್ತಿರುವ ಸುಳ್ಳುಗಳನ್ನು ಜಗಜ್ಜಾಹೀರು ಮಾಡಬೇಕು' ಎಂದು ಕೋರಿದ್ದಾರೆ.
'ಪಾಕಿಸ್ತಾನವನ್ನು ದುಷ್ಟರಾಷ್ಟ್ರವೆಂದು ಪರಿಗಣಿಸಿ, ಅದನ್ನು ಏಕಾಂಗಿಯಾಗಿಸುವ ಮತ್ತು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಲ್ಲ ರಾಜತಾಂತ್ರಿಕ ಪ್ರಯತ್ನಗಳನ್ನೂ ಭಾರತ ಮಾಡಬೇಕು. ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನವನ್ನು ಪ್ರಾದೇಶಿಕವಾಗಿ ಮತ್ತು ಆರ್ಥಿಕವಾಗಿ ಒಂಟಿಯಾಗಿಸಬೇಕು. ಒಂದು ವೇಳೆ, ಪಾಕಿಸ್ತಾನವು ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದರೆ ಬಲವಾದ ಪ್ರತಿಕ್ರಿಯೆ ನೀಡಲು ಹಿಂಜರಿಯಬಾರದು' ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.