ಪ್ರಯಾಗರಾಜ್‌ನ ಸಂಗಮದಲ್ಲಿ ಯಾತ್ರಿಕರು ಪುಣ್ಯಸ್ನಾನ ಮಾಡುತ್ತಿರುವುದು
ಪಿಟಿಐ ಚಿತ್ರ
ಮಹಾಕುಂಭ ನಗರ: ಮಹಾ ಕುಂಭಮೇಳದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವೈಭವಕ್ಕೆ ಮನಸೋತ ಪಾಕಿಸ್ತಾನದ 68 ಹಿಂದೂ ಯಾತ್ರಿಕರ ತಂಡ, ಪ್ರಯಾಗರಾಜ್‌ನ ಸಂಗಮದಲ್ಲಿ ಗುರುವಾರ ಪುಣ್ಯಸ್ನಾನ ಮಾಡಿದೆ. ಯಾತ್ರಿಕರೆಲ್ಲರೂ ಪಾಕಿಸ್ತಾನ ಸಿಂಧ್ ಪ್ರಾಂತ್ಯದವರು.
ಉತ್ತರ ಪ್ರದೇಶದ ಮಾಹಿತಿ ಇಲಾಖೆಯ ಮಾಹಿತಿ ಪ್ರಕಾರ, ಯಾತ್ರಿಕರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಮುಳುಗಿ, ತಮ್ಮ ಪೂರ್ವಜನರ ಆತ್ಮಗಳಿಗೆ ಶಾಂತಿ ಕೋರುತ್ತಾ ಪ್ರಾರ್ಥನೆ ಸಲ್ಲಿಸಿದ್ದಾರೆ.
ತಂಡದಲ್ಲಿದ್ದ ಮಹಂತ್ ರಾಮನಾಥ್ ಎಂಬವರು, 'ನಾವೆಲ್ಲರೂ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿದ್ದೆವು. ಸುಮಾರು 480 ಪೂರ್ವಜರ ಚಿತಾ ಭಸ್ಮವನ್ನು ಅಲ್ಲಿ ವಿಸರ್ಜಿಸಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮಹಾಕುಂಭಕ್ಕೆ ಬಂದಿದ್ದೇವೆ' ಎಂದು ಹೇಳಿದ್ದಾರೆ.
ಸಿಂಧ್‌ನ ನಿವಾಸಿ ಗೋವಿಂದ ರಾಮ್ ಮಖೇಜ, 'ಎರಡು ಮೂರು ತಿಂಗಳ ಹಿಂದೆ ಮಹಾ ಕುಂಭದ ಬಗ್ಗೆ ಕೇಳಿದಾಗಿನಿಂದ, ಇಲ್ಲಿಗೆ ಬರುವ ಹಂಬಲ ಮೂಡಿತ್ತು. ಕಳೆದ ಏಪ್ರಿಲ್‌ನಲ್ಲಿ 250 ಜನರು ಪಾಕಿಸ್ತಾನದಿಂದ ಪ್ರಯಾಗರಾಜ್‌ಗೆ ಬಂದು ಗಂಗಾ ಸ್ನಾನ ಮಾಡಿದ್ದರು. ಸಿಂಧ್‌ನ ಆರು ಜಿಲ್ಲೆಗಳಾದ ಘೋಟ್ಕಿ, ಸುಕ್ಕುರ್, ಖಾಯಿರ್ಪುರ, ಶಿಕಾರ್ಪುರ, ಕರ್ಕೊಟ್ ಮತ್ತು ಜತಬಲ್‌ನ 68 ಜನರು ಈ ಬಾರಿ ಬಂದಿದ್ದೇವೆ. ಇದರಲ್ಲಿ ಸುಮಾರು 50 ಮಂದಿ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದಾರೆ' ಎಂದಿದ್ದಾರೆ.
'ಇದಂತೂ ಹರ್ಷದಾಯಕ ಹಾಗೂ ಭಾವಪರವಶಗೊಳಿಸುವಂತಹ ಅನುಭವವಾಗಿದೆ. ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ. ಶುಕ್ರವಾರ ಮತ್ತೊಮ್ಮೆ ಪವಿತ್ರ ಸ್ನಾನ ಮಾಡುತ್ತೇವೆ. ಇಲ್ಲಿಗೆ ಭೇಟಿ ನೀಡಿರುವುದು ಸನಾತನ ಧರ್ಮದ ಪರಂಪರೆ ಬಗ್ಗೆ ಹೆಮ್ಮೆಯ ಭಾವ ಮೂಡಿಸಿದೆ' ಎಂದೂ ಹೇಳಿದ್ದಾರೆ.
ಘೋಟ್ಕಿಯ 11ನೇ ತರಗತಿ ವಿದ್ಯಾರ್ಥಿ ಸುರ್ಭಿ, ಇದೇ ಮೊದಲ ಬಾರಿಗೆ ಭಾರತ ಮತ್ತು ಮಹಾಕುಂಭ ಮೇಳಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಮಹಾ ಕುಂಭ ಮೇಳದಲ್ಲಿ ಇದುವರೆಗೆ 40 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಮೂಲಗಳು ತಿಳಿಸಿವೆ. ಕುಂಭ ಮೇಳವು ಇದೇ ತಿಂಗಳ 26ರಂದು ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.