ಪ್ರಾತಿನಿಧಿಕ ಚಿತ್ರ
ರಾಯಿಟರ್ಸ್
ಬುಲಂದ್‌ಶಹರ್: ‘ನಾನು ಇಸ್ಲಾಮಾಬಾದ್‌ನವಳು. ಭಾರತದವ ನನ್ನು ಮದುವೆಯಾಗಿದ್ದೇನೆ. ನನ್ನ ದೇಶ ಬಿಟ್ಟು ನಾನು ಇಲ್ಲಿಗೆ ಬಂದಿದ್ದೇನೆ. ಈಗ ಭಾರತವೇ ನನ್ನ ದೇಶ. ವಾಪಸು ಹೋಗಲು ನನಗೆ ಇಷ್ಟವಿಲ್ಲ. ಇಲ್ಲೇ ಇರಲು ಅವಕಾಶ ಕೊಡಿ’ ಎಂದು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಮರಿಯಂ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಗಂಡ ಎಲ್ಲಿರುತ್ತಾರೊ ಅದೇ ನನ್ನ ಮನೆ. ಅವರ ಜೊತೆಯಲ್ಲಿಯೇ ಇರಲು ಅವಕಾಶ ಮಾಡಿಕೊಡಿ’ ಎಂದೂ ಅವರು ಕೇಳಿಕೊಂಡಿದ್ದಾರೆ. ಮರಿಯಂ ಅವರು ಮೂರು ವರ್ಷಗಳ ಹಿಂದೆ ಜಿಲ್ಲೆಯ ಖುರ್ಜ್ ಪ್ರದೇಶದ ಅಮಿರ್ ಎನ್ನುವರನ್ನು ವರಿಸಿದ್ದರು. ಎರಡು ತಿಂಗಳ ಹಿಂದಷ್ಟೆ ಅವರಿಗೆ ಅಲ್ಪಾವಧಿ ವೀಸಾ ದೊರಕಿತ್ತು. ದೀರ್ಘಾವಧಿ ವೀಸಾ ನೀಡುವಂತೆಯೂ ಅವರು ಅರ್ಜಿ ಸಲ್ಲಿಸಿದ್ದರು.
‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ನನಗೆ ತೀವ್ರ ದುಃಖವಾಗಿದೆ. ಈ ದಾಳಿ ನಡೆಸಿದವರನ್ನು ಶಿಕ್ಷಿಸಿ’ ಎಂದು ಮರಿಯಂ ಹೇಳಿದರು.
‘ಮರಿಯಂ ಅವರು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜ್‌ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪೊಲೀಸರ ಪ್ರಕಾರ ಇದೇ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಮಹಿಳೆಯರ ಬಳಿ ಅಲ್ಪಾವಧಿ ವೀಸಾ ಇತ್ತು. ಈ ಪೈಕಿ ಮೂವರನ್ನು ವಾಪಸು ಕಳುಹಿಸಲಾಗಿದೆ. ಮರಿಯಂ ಕೊನೆಯವರು.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತನ್ನ ರಾಜ್ಯದಲ್ಲಿ ಇರುವ ಎಲ್ಲ ಪಾಕಿಸ್ತಾನಿ ಪ್ರಜೆಗಳನ್ನು (ಒಬ್ಬರನ್ನು ಹೊರತುಪಡಿಸಿ) ವಾಪಸು ಕಳುಹಿಸಿರುವ ರಾಜ್ಯ ನಮ್ಮದು’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ. ಆದರೆ, ರಾಜ್ಯದಲ್ಲಿ ಎಷ್ಟು ಮಂದಿ ಪಾಕ್ ಪ್ರಜೆಗಳು ಇದ್ದರು, ಎಷ್ಟು ಜನರನ್ನು ವಾಪಸು ಕಳುಹಿಸಲಾಗಿದೆ ಎಂಬ ನಿಖರ ಮಾಹಿತಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಿಲ್ಲ.
ಬಾಕಿ ಉಳಿದಿರುವ ಪಾಕ್ ಪ್ರಜೆ ಮರಿಯಂ ಅವರೇ ಎಂಬುದನ್ನು ಸರ್ಕಾರ ಖಚಿತವಾಗಿ ಹೇಳಿಲ್ಲ.
ಮಹಿಳೆಯರಿಗೆ ಯಾವಾಗಲೂ ಕಷ್ಟ
ಪಾಕಿಸ್ತಾನ ಪ್ರಜೆಗಳನ್ನು ವಾಪಸು ಕಳುಹಿಸುವ ಭಾರತ ಸರ್ಕಾರದ ನಿರ್ಧಾರದಿಂದಾಗಿ 30–40 ವರ್ಷಗಳ ಹಿಂದೆ ಮದುವೆಯಾಗಿ ಭಾರತಕ್ಕೆ ಬಂದ ಮಹಿಳೆಯರು ಕಷ್ಟ ಅನುಭವಿಸುವಂತಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಥ ಹಲವು ಪ್ರಕರಣಗಳಿವೆ. ಹಲವು ವರ್ಷಗಳಿಂದ ಶಾಂತಿಯುತವಾಗಿ ಇಲ್ಲಿ ನೆಲಸಿರುವ ಮಹಿಳೆಯರನ್ನು ಹೀಗೆ ವಾಪಸು ಕಳುಹಿಸುವುದರಿಂದ ಆಯಾ ಕುಟುಂಬಗಳು
ಭಾವನಾತ್ಮಕವಾಗಿ ತೀವ್ರ ಸಂಕಟ ಅನುಭವಿಸುವಂತಾಗುತ್ತದೆ. ಇದು ಅಮಾನವೀಯ ಕೂಡ. ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಕುರಿತು ಮಾನವೀಯ ಕಾಳಜಿಯಿಂದ ವರ್ತಿಸಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ
– ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.