ADVERTISEMENT

ಐಎಲ್‌ಒ ವರದಿ | ಜನಸಾಮಾನ್ಯರಿಗೆ ‘ಪಕೋಡ’ ಎಂದು ಕೇಂದ್ರವನ್ನು ಟೀಕಿಸಿದ ಕಾಂಗ್ರೆಸ್

ಪಿಟಿಐ
Published 29 ನವೆಂಬರ್ 2024, 12:54 IST
Last Updated 29 ನವೆಂಬರ್ 2024, 12:54 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಭಾರತದಲ್ಲಿ ವೇತನ ಅಸಮಾನತೆಯನ್ನು ಸೂಚಿಸುವ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಶುಕ್ರವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ‘ಪಕೋಡಾ-ನಾಮಿಕ್ಸ್’ನ ನೇರ ಪರಿಣಾಮವನ್ನು ನಾವು ಈಗ ಕಾಣುತ್ತಿದ್ದೇವೆ. ಜನಸಾಮಾನ್ಯರಿಗೆ ‘ಪಕೋಡ’ ಮತ್ತು ಆಯ್ದ ಕೆಲವರಿಗೆ ‘ಹಲ್ವಾ’ ಎಂಬಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ’ ಎಂದು ವ್ಯಂಗ್ಯವಾಡಿದೆ.

ಐಎಲ್‌ಒ ಈಚೆಗೆ ಬಿಡುಗಡೆ ಮಾಡಿರುವ 2024–25ರ ಸಾಲಿನ ಜಾಗತಿಕ ವೇತನ ವರದಿಯು ಭಾರತದಲ್ಲಿರುವ ವೇತನ ಅಸಮಾನತೆಯ ಕುರಿತು ಕೆಲವು ಕಳವಳಕಾರಿ ಅಂಶಗಳನ್ನು ಬಹಿರಂಗಪಡಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ADVERTISEMENT

ವರದಿಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಹೆಚ್ಚು ಆದಾಯ ಗಳಿಸುವವರ ಮತ್ತು ಕಡಿಮೆ ಆದಾಯ ಗಳಿಸುವವರ ನಡುವಿನ ಅಂತರ ಹೆಚ್ಚುತ್ತಿದೆ. ಹೆಚ್ಚು ಆದಾಯ ಹೊಂದಿರುವ ಶೇ10 ರಷ್ಟು ಮಂದಿಯ ಗಳಿಕೆಯು, ಕಡಿಮೆ ಆದಾಯ ಹೊಂದಿರುವ ಶೇ 10 ರಷ್ಟು ಮಂದಿಯ ಗಳಿಕೆಗಿಂತ 6.8 ಪಟ್ಟು ಅಧಿಕವಿದೆ ಎಂದಿದ್ದಾರೆ.

‘ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಮ್ಯಾನ್ಮಾರ್ ಸೇರಿದಂತೆ ನಮ್ಮ ನೆರೆಯ ದೇಶಗಳ ಜತೆ ಹೋಲಿಸಿದಾಗ ನಮ್ಮಲ್ಲಿ ವೇತನದ ಅಸಮಾನತೆ ಗಮನಾರ್ಹವಾಗಿ ಹೆಚ್ಚಿದೆ’ ಎಂದು ಹೇಳಿದ್ದಾರೆ.

ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಕಾಂಗ್ರೆಸ್ ಟೀಕಿಸುತ್ತಲೇ ಬಂದಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ನಿರುದ್ಯೋಗ ಹೆಚ್ಚುತ್ತಿರುವ ಬಗ್ಗೆ ಹಲವು ಸಲ ಕಳವಳ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.