ADVERTISEMENT

ಪಂಡೋರ ಪೇಪರ್ಸ್‌: ತೆರಿಗೆ ರಹಿತ ಪ್ರದೇಶದ ಹೂಡಿಕೆ ಮಾಹಿತಿ ಬಯಲು

ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ ಹೆಸರು

ಪಿಟಿಐ
Published 5 ಅಕ್ಟೋಬರ್ 2021, 1:09 IST
Last Updated 5 ಅಕ್ಟೋಬರ್ 2021, 1:09 IST
ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ
ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ   

ನವದೆಹಲಿ : 300ಕ್ಕೂ ಹೆಚ್ಚು ಭಾರತೀಯರು, ವಿವಿಧ ದೇಶಗಳ ರಾಜಕಾರಣಿಗಳು, ಉದ್ಯಮಿಗಳು, ಸಿರಿವಂತರು ತೆರಿಗೆ ರಹಿತ ದೇಶಗಳಲ್ಲಿ ಮಾಡಿದ ಹೂಡಿಕೆ ಮಾಹಿತಿ ಬಹಿರಂಗವಾಗಿದೆ.

ಸೋರಿಕೆಯಾದ ದಾಖಲೆಗಳನ್ನು ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟವು (ಐಸಿಐಜೆ) ಬಿಡುಗಡೆ ಮಾಡಿದೆ. ‘ಪಂಡೋರ ಪೇಪರ್ಸ್’ ಹೆಸರಿನ ಈ ದಾಖಲೆಗಳಲ್ಲಿ30ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು ಅಥವಾ ಮಾಜಿ ಮುಖ್ಯಸ್ಥರು ಅಥವಾ ಅವರ ಕುಟುಂಬದವರು, ನಿಕಟವರ್ತಿಗಳು, ಸಚಿವರು, ಅಧಿಕಾರಿಗಳು ಮಾಡಿರುವ ಹೂಡಿಕೆಯ ಮಾಹಿತಿ ಇದೆ.

ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ, ವಿನೋದ್ ಅದಾನಿ, ಜಾಕಿಶ್ರಾಫ್, ಕಿರಣ್ ಮಜುಂದಾರ್ ಶಾ ಅವರ ಪತಿ, ನೀರಾ ರಾಡಿಯಾ, ಸತೀಶ್ ಶರ್ಮಾ ಸೇರಿದಂತೆ ಭಾರತದ ಹಲವರು ಈ ಪಟ್ಟಿಯಲ್ಲಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿಕಟವರ್ತಿಗಳು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತರು, ಕೀನ್ಯಾ ಅಧ್ಯಕ್ಷ, ಜೋರ್ಡನ್ ದೊರೆ, ಗಾಯಕಿ ಶಕೀರಾ ಸೇರಿದಂತೆ ಖ್ಯಾತನಾಮರು ಮಾಡಿದ ಹೂಡಿಕೆಗಳ ವಿವರಗಳನ್ನು ಪ್ರಕಟಿಸಲಾಗಿದೆ.

ADVERTISEMENT

‘ತಮ್ಮ ಪತಿ ವಿದೇಶದಲ್ಲಿ ಹೊಂದಿರುವ ಟ್ರಸ್ಟ್‌ ಕಾನೂನುಬದ್ಧವಾಗಿದ್ದು, ಸ್ವತಂತ್ರ ಟ್ರಸ್ಟಿಗಳು ನಿರ್ವಹಿಸುತ್ತಿದ್ದಾರೆ’
ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ. ‘ಹೂಡಿಕೆ ನ್ಯಾಯಸಮ್ಮತವಾಗಿದ್ದು, ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದುತೆಂಡೂಲ್ಕರ್ ಅವರ ವಕೀಲರು ತಿಳಿಸಿದ್ದಾರೆ.

2.94 ಟೆರಾಬೈಟ್‌ನಷ್ಟು ದತ್ತಾಂಶದಲ್ಲಿ 200ಕ್ಕೂ ಹೆಚ್ಚು ದೇಶಗಳ ಶ್ರೀಮಂತರ ಒಡೆತನದಲ್ಲಿರುವ ಸಂಸ್ಥೆಗ
ಳನ್ನು ಹೆಸರಿಸಲಾಗಿದೆ. ವಿದೇಶಗಳ 14 ಸೇವಾ ಪೂರೈಕೆದಾರರ ಗೋಪ್ಯ ದಾಖಲೆಗಳು ಇವಾಗಿವೆ.

ಕಂಪನಿಗಳು, ಟ್ರಸ್ಟ್‌ಗಳು, ಪ್ರಾಧಿಕಾರಗಳು ಹಾಗೂ ಸಂಸ್ಥೆಗಳನ್ನು ಕಡಿಮೆ ಅಥವಾ ತೆರಿಗೆ ರಹಿತವಾಗಿ ಸ್ಥಾಪಿಸುವ ಬಗ್ಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವೃತ್ತಿಪರ ಸೇವೆಗಳನ್ನು ಈ ಸೇವಾದಾತ ಸಂಸ್ಥೆಗಳು ನೀಡುತ್ತವೆ.

‘ತೆರಿಗೆಮುಕ್ತ ದೇಶಗಳಿಂದ ಪ್ರತಿವರ್ಷ ಜಾಗತಿಕವಾಗಿ ₹32 ಲಕ್ಷ ಕೋಟಿ ತೆರಿಗೆ ನಷ್ಟವಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇದರಿಂದ ಹೆಚ್ಚು ಹಾನಿಗೊಳಗಾಗುತ್ತವೆ. ಈ ಪ್ರವೃತ್ತಿಯಿಂದ ಅಪರಾಧ ಮತ್ತು ಭ್ರಷ್ಟಾಚಾರ ಬೆಳೆಯುತ್ತದೆ’ ಎಂದು ಖಾಸಗಿ ನಿಗಾ ಸಂಸ್ಥೆ ಆಕ್ಸ್‌ಫ್ಯಾಮ್ ಇಂಡಿಯಾ ಅಭಿಪ್ರಾಯಪಟ್ಟಿದೆ.

ತನಿಖೆಗೆ ಮುಂದಾದ ಸರ್ಕಾರ

ಪಂಡೋರ ದಾಖಲೆಗಳಲ್ಲಿ ಪ್ರಸ್ತಾಪಿಸಿದ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಕೇಂದ್ರ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿವಿವಿಧ ಸಂಸ್ಥೆಗಳ ಗುಂಪು (ಎಂಎಜಿ) ತನಿಖೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.ಜಾರಿ ನಿರ್ದೇಶನಾಲಯ, ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಗುಪ್ತಚರ ಘಟಕದ ಪ್ರತಿನಿಧಿಗಳು ಈ ತಂಡದಲ್ಲಿ ಇರಲಿದ್ದಾರೆ.

‘ಈ ಬೆಳವಣಿಗೆಗಳನ್ನು ಸರ್ಕಾರ ಗಮನಿಸುತ್ತಿದ್ದು, ತನಿಖೆಯ ಬಳಿಕ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಪ್ರಕರಣಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸುವ ಉದ್ದೇಶದಿಂದ ಸರ್ಕಾರವು ಇತರ ದೇಶಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಸರ್ಕಾರವು ಅಂತರ-ಸರ್ಕಾರಿ ಗುಂಪಿನ ಭಾಗವಾಗಿದ್ದು, ತೆರಿಗೆ ವಂಚನೆಯಂತಹ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಇತರ ದೇಶಗಳ ಜೊತೆ ಸಹಯೋಗ ಸಾಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.