ADVERTISEMENT

ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ: CM ಫಡಣವೀಸ್

ಪಿಟಿಐ
Published 25 ಮಾರ್ಚ್ 2025, 10:20 IST
Last Updated 25 ಮಾರ್ಚ್ 2025, 10:20 IST
<div class="paragraphs"><p>ದೇವೇಂದ್ರ ಫಡಣವೀಸ್</p></div>

ದೇವೇಂದ್ರ ಫಡಣವೀಸ್

   

ಪಿಟಿಐ ಚಿತ್ರ

ಮುಂಬೈ: ‘ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಸದನದಲ್ಲಿ ಹೇಳಿದ್ದಾರೆ. 

ADVERTISEMENT

‘ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನೆನಪಿನಲ್ಲಿ ‘ಶಿವ ಸ್ಮಾರಕ’ ನಿರ್ಮಿಸಲಾಗುತ್ತಿದೆ. 1761ರಲ್ಲಿ ಮರಾಠರು ಮತ್ತು ಆಫ್ಗಾನ್‌ನ ಅಹ್ಮದ್ ಶಾ ಅಬ್ದಾಲಿ ನಡುವೆ ನಡೆದ ಪಾಣಿಪತ್ (ಹರಿಯಾಣ) ಮೂರನೇ ಕದನದ ನೆನಪಿನಲ್ಲಿ ನಿರ್ಮಿಸಲಾಗುತ್ತಿರುವ ಈ ಸ್ಮಾರಕಕ್ಕೆ ಜಾಗವನ್ನು ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಮರಾಠರನ್ನು ಅಬ್ದಾಲಿ ಸೋಲಿಸಿದ್ದ ಪಾಣಿಪತ್ ನೆನಪಿನಲ್ಲಿ ಸ್ಮಾರಕ ಏಕೆ ನಿರ್ಮಿಸಲಾಗುತ್ತಿದೆ? ಪಾಣಿಪತ್ ಎಂಬುದು ಮರಾಠರ ಪಾಲಿಗೆ ಶೌರ್ಯವೂ ಅಲ್ಲ, ಸೋಲಿನ ಸಂಕೇತವೂ ಅಲ್ಲ. ಅಹ್ಮದ್ ಶಾ ಅಬ್ದಾಲಿ ಹಾಗೂ ಮರಾಠಾ ಸಾಮ್ರಾಜ್ಯದ ಸದಾಶಿವರಾವ್ ಭಾವು ಅವರ ನಡುವೆ ಕದನ ನಡೆದಿತ್ತು. ಆದರೆ ಸೋಲಿನ ಸಂಕೇತವಾಗಿ ಸ್ಮಾರಕ ನಿರ್ಮಿಸಿದ ಉದಾಹರಣೆ ಜಗತ್ತಿನ ಯಾವ ಪ್ರದೇಶದಲ್ಲೂ ಇಲ್ಲ’ ಎಂದು ಎಂಬ ಎನ್‌ಸಿಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವಾದ್‌ ಅವರು ಹೇಳಿದ್ದಾರೆ.

‘ಈ ಕದನವು ಮರಾಠರ ಶೌರ್ಯದ ಪ್ರತೀಕದಂತಿದೆ. ಅಬ್ದಾಲಿ ದೆಹಲಿಯನ್ನು ಗೆದ್ದಾಗ, ರಕ್ಷಣೆ ಕೋರಿ ದೆಹಲಿ ಸುಲ್ತಾನ ಮರಾಠರ ನೆರವು ಕೋರಿದ್ದು ದಾಖಲಾಗಿದೆ. ಇದು ಮರಾಠರ ಶೌರ್ಯಕ್ಕೆ ಸಂದ ಗೌರವವಾಗಿದೆ. ಮರಾಠರು ದೆಹಲಿಗೆ ತೆರಳಿ ಅಬ್ದಾಲಿಯನ್ನು ಸೋಲಿಸಿದರು. ಅಲ್ಲಿಂದ ಕಾಲ್ಕಿತ್ತ ಅಬ್ದಾಲಿ, ಯಮುನಾ ನದಿಯ ಆ ದಂಡೆಯಲ್ಲಿ ಬೀಡು ಬಿಟ್ಟಿದ್ದ. ನಂತರ ಮರಾಠರಿಗೆ ಪತ್ರ ಬರೆದಿದ್ದ ಅಬ್ದಾಲಿ, ಪಂಜಾಬ್, ಸಿಂಧ್ ಮತ್ತು ಬಲೂಚಿಸ್ತಾನ್‌ ತನಗೆ ಸೇರಿದ್ದು. ದೇಶದ ಉಳಿದ ಭಾಗ ಮರಾಠರಿಗೆ ಸೇರಿದ್ದು ಎಂದು ಮರಾಠ ಸಾಮ್ರಾಜ್ಯಕ್ಕೆ ಪತ್ರ ಬರೆದಿದ್ದ’ ಎಂದು ಫಡಣವೀಸ್ ಇತಿಹಾಸವನ್ನು ನೆನಪಿಸಿಕೊಂಡರು.

‘ಒಂದಿಂಚನ್ನೂ ಬಿಟ್ಟುಕೊಡಲು ನಿರಾಕರಿಸಿದ ಮರಾಠರು, ಈ ಮೂರೂ ಪ್ರದೇಶಗಳನ್ನು ಭಾರತದೊಂದಿಗೆ ಉಳಿಸಿಕೊಳ್ಳಲು ಹೋರಾಡಿದರು’ ಎಂದು ಸಧನಕ್ಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.