ADVERTISEMENT

ಕೇಂದ್ರ ಸಚಿವ ಅಮಿತ್ ಶಾ ಖಾತೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ಸಂಸದೀಯ ಸಮಿತಿ ಗರಂ

ಡೆಕ್ಕನ್ ಹೆರಾಲ್ಡ್
Published 22 ಜನವರಿ 2021, 5:49 IST
Last Updated 22 ಜನವರಿ 2021, 5:49 IST
ಟ್ವಿಟರ್ ಪ್ರಾತಿನಿಧಿಕ ಚಿತ್ರ
ಟ್ವಿಟರ್ ಪ್ರಾತಿನಿಧಿಕ ಚಿತ್ರ   

ನವದೆಹಲಿ: 2020ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಖಾತೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರ ಜೊತೆಗೆ ಭಾರತೀಯ ನಕ್ಷೆಯನ್ನು ತಪ್ಪಾಗಿ ನಿರೂಪಿಸಿದ್ದ ಬಗ್ಗೆ ಸಂಸದೀಯ ಸಮಿತಿ ಸದಸ್ಯರು ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದೀಯ ಸ್ಥಾಯಿ ಸಮಿತಿ ಸದಸ್ಯರು ನಾಗರಿಕರ ಹಕ್ಕುಗಳನ್ನು ಕಾಪಾಡುವುದು, ಸಾಮಾಜಿಕ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವುದು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಹಿಳಾ ಭದ್ರತೆ ಕುರಿತು ಫೇಸ್‌ಬುಕ್, ಟ್ವಿಟರ್ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಗುರುವಾರ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಟ್ವಿಟರ್ ಪ್ರತಿನಿಧಿಗಳೊಂದಿಗಿನ ಸಂವಾದದ ಸಮಯದಲ್ಲಿ, ಕೆಲವು ಸದಸ್ಯರು ಅದರಲ್ಲಿ ಹೆಚ್ಚಾಗಿ ಆಡಳಿತಾರೂಢ ಬಿಜೆಪಿಯವರು, ಕಳೆದ ವರ್ಷದ ಕೊನೆಯಲ್ಲಿ ಅಲ್ಪಾವಧಿಗೆ ಶಾ ಅವರ ಖಾತೆಯನ್ನು ಸ್ಥಗಿತಗೊಳಿಸಿದ್ದ ವಿಚಾರವನ್ನು ಎತ್ತಿದರು ಎಂದು ಸಭೆಯ ನಂತರ ಮೂಲಗಳು ತಿಳಿಸಿವೆ.

ADVERTISEMENT

ಕೆಲವು ಬಿಜೆಪಿ ಸದಸ್ಯರು, ಟ್ವಿಟರ್‌ನಲ್ಲಿ ಫ್ಯಾಕ್ಟ್‌ಚೆಕ್ ಕಾರ್ಯವಿಧಾನವನ್ನು ಪ್ರಶ್ನಿಸಿದರು ಮತ್ತು ದೇಶದ ಗೃಹ ಸಚಿವರ ಖಾತೆಯನ್ನೇ ಹೇಗೆ ಸ್ಥಗಿತಗೊಳಿಸಲಾಯಿತು ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

'ಅಜಾಗರೂಕ ದೋಷ'ದಿಂದಾಗಿ ಶಾ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಕೂಡಲೇ ಆ ನಿರ್ಧಾರವನ್ನು ಕೈಬಿಡಲಾಯಿತು ಮತ್ತು ಖಾತೆಯು ಸಂಪೂರ್ಣವಾಗಿ ಸಕ್ರಿಯಗೊಳಿಸಲಾಯಿತು ಎಂದು ಟ್ವಿಟರ್ ಹೇಳಿದೆ.

'ಕೃತಿಸ್ವಾಮ್ಯ ಹೊಂದಿರುವವರಿಂದ ಬಂದ ವರದಿಗೆ' ಅನುಗುಣವಾಗಿ ಶಾ ಅವರ ಟ್ವಿಟರ್ ಪ್ರದರ್ಶನ ಚಿತ್ರವನ್ನು ಟ್ವಿಟರ್‌ ತೆಗೆದುಹಾಕಿದೆ. ಹೀಗಾಗಿ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕಾಗಿತ್ತು ಎಂದು ಟ್ವಿಟರ್ ಅಧಿಕಾರಿಗಳು ವಿವರಿಸಿದ್ದಾರೆ.

ಸಮಿತಿಯ ಸದಸ್ಯರು ಟ್ವಿಟರ್ ಭಾರತೀಯ ನಕ್ಷೆಯನ್ನು ತಪ್ಪಾಗಿ ಬಿಂಬಿಸುವ ವಿಷಯವನ್ನು ಪ್ರಶ್ನಿಸಿದರು ಎಂದು ಸದಸ್ಯರೊಬ್ಬರು ಹೇಳಿದರು.

ಯಾವ ಆಧಾರದ ಮೇಲೆ ಟ್ವಿಟರ್‌ನಿಂದ ವಿಷಯಗಳನ್ನು ತೆಗೆದುಹಾಕಲಾಗುತ್ತಿದೆ ಮತ್ತು ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಕೆಲವು ಸದಸ್ಯರು ಕೇಳಿದಾಗ, ಕಂಪನಿಯ ಪ್ರತಿನಿಧಿಗಳು 'ಆರೋಗ್ಯಕರ ವೇದಿಕೆ'ಯನ್ನು ರಚಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಆದರೆ ಇಷ್ಟಕ್ಕೆ ತೃಪ್ತರಾಗದ ಕೆಲವು ಸದಸ್ಯರು, ಕೆಲವು ಖಾತೆಗಳನ್ನು ನಿರ್ಬಂಧಿಸಲು ಮತ್ತು ಇತರರ ಖಾತೆಗಳನ್ನು ಕೈಬಿಡಲು ಹೇಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಗಳನ್ನು ಕೋರಿದರು ಎಂದು ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.