ಮತದಾನ
– ಪ್ರಜಾವಾಣಿ ಚಿತ್ರ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳು ಮಹಿಳಾ ಮತದಾರರನ್ನು ಓಲೈಸುತ್ತಿವೆ. ಮಹಿಳೆಯರ ಖಾತೆಗಳಿಗೆ ಹಣ ವರ್ಗಾಹಿಸುವ ಯೋಜನೆಯನ್ನು ಈ ಮೂರು ಪಕ್ಷಗಳು ಘೋಷಿಸಿವೆ.
ಇದಕ್ಕೆ ಕಾರಣವೂ ಇದೆ. ದೆಹಲಿಯಲ್ಲಿ ಒಟ್ಟು ಮತದಾರರ ಪೈಕಿ 71.73 ಲಕ್ಷ ಮಹಿಳಾ ಮತದಾರರಿದ್ದಾರೆ. ಅಂದರೆ, ಒಟ್ಟು ಮತದಾರರ ಪ್ರಮಾಣದಲ್ಲಿ ಮಹಿಳಾ ಮತದಾರರ ಪಾಲು ಶೇ 46.2ರಷ್ಟಿದೆ.
ಖಾತೆಗೆ ಹಣ ವರ್ಗಾವಣೆ ಮಾಡುವ ಇಂಥ ಯೋಜನೆಗಳ ಕುರಿತು ದೆಹಲಿಯ ಮಹಿಳೆಯರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಕೇವಲ ಚುನಾವಣೆಗಾಗಿನ ಘೋಷಣೆಯೋ ಅಥವಾ ಜಾರಿಯಾಗುವಂಥ ಯೋಜನೆಯೋ ಎಂದೂ ಮಹಿಳೆಯರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಮಹಿಳೆಯರನ್ನು ಕೇಂದ್ರೀಕರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಿರುವುದು ಪ್ರಶಂಸಾರ್ಹವೇ ಆಗಿದೆ. ಆದರೆ, ಮಹಿಳೆಯರಿಗಾಗಿ ಉದ್ಯೋಗ ಸೃಷ್ಟಿ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವಂಥ ಯೋಜನೆಗಳನ್ನೂ ರೂಪಿಸಬೇಕು ಎನ್ನುವುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಪ್ರಿಯಾ ಶರ್ಮಾ.
ಮನೆಗೆಲಸ ಮಾಡುವ ಆಶಾ ಕುಮಾರಿ ಅವರಿಗೆ ಈ ಯೋಜನೆಯು ಲಾಭದಾಯಕ ಎನಿಸಿದೆ. ‘ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ನಮ್ಮಂಥವರಿಗೆ, ಬೆಲೆ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಈ ಯೋಜನೆಯು ಆಶಾಕಿರಣವಾಗಿದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.