ADVERTISEMENT

PM ಮೋದಿ ತಾಯಿಯ AI ವಿಡಿಯೊ ತೆಗೆಯಲು ಕಾಂಗ್ರೆಸ್‌ಗೆ ಪಟ್ನಾ ಹೈಕೋರ್ಟ್ ನಿರ್ದೇಶನ

ಪಿಟಿಐ
Published 17 ಸೆಪ್ಟೆಂಬರ್ 2025, 8:18 IST
Last Updated 17 ಸೆಪ್ಟೆಂಬರ್ 2025, 8:18 IST
   

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಲ್ಲಿ ಅವರ ತಾಯಿ ಬಂದು ‘ಬಿಹಾರದಲ್ಲಿ ನನ್ನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದೀಯಾ’ ಎಂದು ಗದರಿಸುವಂತೆ ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಂಡಿದ್ದ ಎಐ ಆಧಾರಿತ ವಿಡಿಯೊವನ್ನು ಕೂಡಲೇ ತೆಗೆಯುವಂತೆ ಕಾಂಗ್ರೆಸ್‌ನ ಬಿಹಾರ ಘಟಕಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ವಿವೇಕಾನಂದ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಬಿ.ಬೈಜಂತ್ರಿ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.

ಅರ್ಜಿಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಪಕ್ಷಗಾರರನ್ನಾಗಿ ಮಾಡಲಾಗಿತ್ತು.

ADVERTISEMENT

ವಿಡಿಯೊ ತೆಗೆದುಹಾಕಲು ಸೂಚಿಸಿದ ಪೀಠವು ರಾಹುಲ್ ಗಾಂಧಿ, ಫೇಸ್‌ಬುಕ್, ಟ್ವಿಟರ್ ಮತ್ತು ಗೂಗಲ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ಸಿದ್ಧಾರ್ಥ ಪ್ರಸಾದ್ ತಿಳಿಸಿದ್ದಾರೆ.

ಇದೇ ವರ್ಷಾಂತ್ಯದಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ರಾಜಕೀಯ ಸಂಚಲನ ಜೋರಾಗಿದ್ದು. ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ಈ ವಿಡಿಯೊ ಹಂಚಿಕೊಂಡಿತ್ತು. 

ಕಾಂಗ್ರೆಸ್‌ನ ನಡೆಗೆ ಬಿಜೆಪಿ ತೀವ್ರ ಟೀಕಾಪ್ರಹಾರ ನಡೆಸಿತ್ತು. ಈ ಕುರಿತು ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು, ‘ರಾಜಕಾರಣದಲ್ಲಿ ವಿರೋಧಿಸುವ ಎಲ್ಲ ನಡೆಗಳನ್ನೂ ಬಿಹಾರ ಕಾಂಗ್ರೆಸ್ ಮೀರಿದೆ. ಇದು ಅಸಹ್ಯ ರಾಜಕಾರಣದ ಪರಮಾವಧಿ’ ಎಂದು ಕಿಡಿಕಾರಿದ್ದರು.

‘ಪ್ರಧಾನಿ ತಾಯಿಯನ್ನು ನಿಂದಿಸಿದ್ದಕ್ಕೆ ಪಶ್ಚಾತ್ತಾಪ ಪಡದ ಕಾಂಗ್ರೆಸ್, ಮತ್ತೊಮ್ಮೆ ಕೆಟ್ಟದಾಗಿ ವಿಡಿಯೊ ಮಾಡಿ ಅಟ್ಟಹಾಸ ಮೆರೆದಿದೆ. ಬಿಹಾರ ಜನತೆ ಇದನ್ನೆಲ್ಲ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಹಾಗೂ ಅದನ್ನು ಬೆಂಬಲಿಸುವ ಆರ್‌ಜೆಡಿಗೆ ತಕ್ಕ ಉತ್ತರ ಕೊಡುತ್ತಾರೆ’ ಎಂದೂ ಹೇಳಿದ್ದರು.

ಬಿಜೆಪಿ ಹಿರಿಯ ನಾಯಕ ಅನುರಾಗ್ ಠಾಕೂರ್ ಅವರೂ ಕಾಂಗ್ರೆಸ್‌ನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.