ADVERTISEMENT

Opposition Unity: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2023, 6:45 IST
Last Updated 23 ಜೂನ್ 2023, 6:45 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವೆಲ್ಲರೂ ಜೊತೆಯಾಗಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಅದಕ್ಕಾಗಿಯೇ ಒಗ್ಗೂಡಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಸಿದ್ದಾಂತಗಳ ನಡುವೆ ಕದನ...

ADVERTISEMENT

ದೇಶದಲ್ಲಿ ಸಿದ್ಧಾಂತಗಳ ನಡುವೆ ಕದನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್‌ನ 'ಭಾರತ್ ಜೋಡೊ' ಮತ್ತೊಂದೆಡೆ ಬಿಜೆಪಿ-ಆರ್‌ಎಸ್‌ಎಸ್‌ನ 'ಭಾರತ್ ತೋಡೊ' (ಮುರಿಯುವ) ಸಿದ್ಧಾಂತ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಡಿಎನ್‌ಎ ಇರುವುದರಿಂದ ಇಲ್ಲಿಗೆ ಬಂದಿದ್ದೇವೆ ಎಂದು ಪಾಟ್ನಾದಲ್ಲಿ ಹೇಳಿದ್ದಾರೆ.

ಬಿಜೆಪಿಗೆ ಸೋಲು ಖಚಿತ...

ಮುಂಬರುವ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ರಾಹುಲ್ ಗಾಂಧಿ ಹೇಳಿದರು. ಈ ಎಲ್ಲ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಈ ವೇದಿಕೆಯಲ್ಲೇ ಹೇಳುತ್ತೇನೆ ಎಂದು ಹೇಳಿದ್ದಾರೆ.

ದ್ವೇಷ ಹರಡುತ್ತಿರುವ ಬಿಜೆಪಿ...

ದ್ವೇಷ ಹರಡುತ್ತಿರುವ ಬಿಜೆಪಿ ದೇಶವನ್ನು ಒಡೆಯುತ್ತಿದೆ. ಮತ್ತೊಂದೆಡೆ ಪ್ರೀತಿ ಪಸರಿಸುವ ಮೂಲಕ ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

ಬಿಹಾರ ಗೆದ್ದರೆ ದೇಶವನ್ನೇ ಗೆಲ್ಲುತ್ತೇವೆ: ಖರ್ಗೆ

ಮತ್ತೊಂದೆಡೆ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಎಂದಿಗೂ ನಮ್ಮ ಸಿದ್ಧಾಂತವನ್ನು ಬಿಟ್ಟಿಲ್ಲ. ಬಿಹಾರವನ್ನು ಗೆದ್ದರೆ ಇಡೀ ದೇಶವನ್ನೇ ಗೆಲ್ಲುತ್ತೇವೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.