ADVERTISEMENT

ಭಾರತದಲ್ಲಿ ಕೋವಿಡ್ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲು ಫೈಝರ್ ಮನವಿ

ಪಿಟಿಐ
Published 6 ಡಿಸೆಂಬರ್ 2020, 9:09 IST
Last Updated 6 ಡಿಸೆಂಬರ್ 2020, 9:09 IST
ಫೈಝರ್ - ರಾಯಿಟರ್ಸ್‌ ಚಿತ್ರ
ಫೈಝರ್ - ರಾಯಿಟರ್ಸ್‌ ಚಿತ್ರ   

ನವದೆಹಲಿ: ಭಾರತದಲ್ಲಿ ಕೋವಿಡ್–19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ‘ಫೈಝರ್ ಇಂಡಿಯಾ’ ಕಂಪನಿಯು ಡಿಸಿಜಿಐಗೆ (ಭಾರತೀಯ ಪ್ರಧಾನ ಔಷಧ ನಿಯಂತ್ರಕ) ಮನವಿ ಮಾಡಿದೆ. ಬ್ರಿಟನ್‌ ಮತ್ತು ಬಹರೇನ್‌ನಲ್ಲಿ ಫೈಝರ್ ಲಸಿಕೆ ಬಳಕೆಗೆ ಈಗಾಗಲೇ ಅನುಮತಿ ದೊರೆತಿದೆ.

‘2019ರ ಹೊಸ ಔಷಧ ಮತ್ತು ಕ್ಲಿನಿಕಲ್ ಟ್ರಯಲ್’ ವಿಶೇಷ ನಿಯಮಗಳ ಅಡಿಯಲ್ಲಿ ಭಾರತದಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ವಿನಾಯಿತಿ ನೀಡುವುದರ ಜತೆಗೆ ಲಸಿಕೆ ಆಮದು ಮತ್ತು ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಡಿಸಿಜಿಐಗೆ ಬರೆದ ಪತ್ರದಲ್ಲಿ ಫೈಝರ್ ಉಲ್ಲೇಖಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಕೋವಿಡ್–19 ಲಸಿಕೆಯ ಬಳಕೆಗೆ ತುರ್ತು ಅನುಮತಿ ನೀಡುವಂತೆ ಕೋರಿ ‘ಫೈಝರ್ ಇಂಡಿಯಾ’ವು ಡಿಸೆಂಬರ್ 4ರಂದು ಡಿಸಿಜಿಐಗೆ ಮನವಿ ಸಲ್ಲಿಸಿದೆ’ ಎಂದೂ ಮೂಲಗಳು ತಿಳಿಸಿವೆ.

ಭಾರತದಲ್ಲಿ ಕೋವಿಡ್–19 ಲಸಿಕೆ ಬಳಕೆಗೆ ಅನುಮತಿ ಕೋರಿದ ಮೊದಲ ಕಂಪನಿಯಾಗಿದೆ ‘ಫೈಝರ್ ಇಂಡಿಯಾ’.

ಬ್ರಿಟನ್‌ನಲ್ಲಿ ಫೈಝರ್ ಲಸಿಕೆ ಬಳಕೆಗೆ ಬುಧವಾರ ಅನುಮತಿ ನೀಡಲಾಗಿತ್ತು. ಇದರೊಂದಿಗೆ ಸರ್ಕಾರದ ಮಾನ್ಯತೆ ಪಡೆದ ಮೊದಲ ಕೋವಿಡ್‌ ತಡೆ ಲಸಿಕೆ ಎಂಬ ಹಿರಿಮೆಗೆ ಈ ಲಸಿಕೆ ಪಾತ್ರವಾಗಿದೆ. ಬಳಿಕ ಬಹರೇನ್‌ನಲ್ಲೂ ಲಸಿಕೆ ಬಳಕೆಗೆ ಫೈಝರ್‌ಗೆ ಅನುಮತಿ ದೊರೆತಿದೆ.

ಅಮೆರಿಕ ಮೂಲದ ಫೈಝರ್ ಮತ್ತು ಜರ್ಮನಿಯ ಬಯೊಎನ್‌ಟೆಕ್‌ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು ಎಲ್ಲಾ ವಯಸ್ಸಿನವರಲ್ಲಿಯೂ ಕೋವಿಡ್‌ ತಡೆಯಲು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಈ ಹಿಂದೆಯೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.