
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ ನಡೆಯಲಿದೆ. ‘ಇಂಡಿಯಾ’ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಹಾಲಿ ಉಪ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಸಾಮ್ರಾಟ್ ಚೌಧರಿ ಅವರು ಈ ಹಂತದಲ್ಲಿ ಕಣದಲ್ಲಿರುವ ಪ್ರಮುಖರು. ಬಿಹಾರ ಸರ್ಕಾರದ ಪ್ರಮುಖವಾಗಿ ಬಿಜೆಪಿಯ ಅರ್ಧಕ್ಕೂ ಹೆಚ್ಚು ಸಚಿವರು ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.
ಗಮನ ಸೆಳೆದಿರುವ ಕ್ಷೇತ್ರಗಳು
ರಘೋಪುರ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರು ಸ್ಪರ್ಧಿಸುತ್ತಿದ್ದಾರೆ. ತಂದೆ ಲಾಲು ಪ್ರಸಾದ್ ಎರಡು ಬಾರಿ, ತಾಯಿ ರಾಬ್ಡಿ ದೇವಿ ಅವರು ಮೂರು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಶೇಷವೆಂದರೆ, ಈ ಕ್ಷೇತ್ರದಿಂದ ಗೆದ್ದ ಬಳಿಕ ಈ ಇಬ್ಬರೂ ಮುಖ್ಯಮಂತ್ರಿಯಾಗಿದ್ದರು. ಈಗ ತೇಜಸ್ವಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ
ಮಹುವಾ ಕ್ಷೇತ್ರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಮತ್ತೊಬ್ಬ ಮಗ ತೇಜ್ ಪ್ರತಾಪ್ ಅವರು ಸ್ಪರ್ಧಿಸುತ್ತಿದ್ದಾರೆ. ಕೌಂಟುಬಿಕ ಕಾರಣಗಳಿಂದ ಲಾಲು ಪ್ರಸಾದ್ ಅವರು ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ಬಳಿಕ ಇವರು ‘ಜನಶಕ್ತಿ ಜನತಾದಳ’ ಪಕ್ಷ ಕಟ್ಟಿದರು
ಸಾಮ್ರಾಟ್ ಚೌಧರಿ ಅವರು ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಎರಡು ಬಾರಿ ಇವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಸುಮಾರು 10 ವರ್ಷಗಳ ಬಳಿಕ ಇವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ
ರಘುನಾಥಪುರ ಕ್ಷೇತ್ರದಿಂದ 31 ವರ್ಷದ ಒಸಾಮಾ ಶಹಬ್ ಅವರು ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಗ್ಯಾಂಗ್‌ಸ್ಟರ್ ಆಗಿದ್ದು, ಬಳಿಕ ರಾಜಕಾರಣಿಯಾದ ಮೊಹಮ್ಮದ್ ಶಹಾಬುದ್ದೀನ್ ಅವರ ಮಗ. ಆರ್‌ಜೆಡಿ ಅಧಿಕಾರಕ್ಕೆ ಬಂದರೆ ‘ಜಂಗಲ್ ರಾಜ್’ ಮರಳುತ್ತದೆ ಎಂಬ ಆರೋಪಕ್ಕೆ ಈ ಕ್ಷೇತ್ರವನ್ನೇ ಕೇಂದ್ರವಾಗಿಸಿಕೊಂಡು ಪ್ರಚಾರ ನಡೆಸಿದ್ದರು
ಜನಪದ ಗಾಯಕಿ 25 ವರ್ಷ ಮಿಥಾಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲಿನಗರಕ್ಕೆ ‘ಸೀತಾನಗರ’ ಎಂದು ಮರುನಾಮಕರಣ ಮಾಡುವುದಾಗಿ ಇತ್ತೀಚೆಗೆ ಮಿಥಾಲಿ ಹೇಳಿದ್ದರು. ಸೀತಾ ಮಾತೆಗೆ ಗೌರವ ಸೂಚಿಸಲು ನಗರದ ಹೆಸರು ಬದಲಾಯಿಸಲಾಗುವುದ ಎಂದಿದ್ದರು
ಮೊಕಾಮ್ ಕ್ಷೇತ್ರವು ಈ ಬಾರಿ ಎಲ್ಲರ ಗಮನ ಸೆಳೆದಿದೆ. ಜೆಡಿಯು ಟಿಕೆಟ್‌ನಿಂದ ‘ಡಾನ್’ ಅನಂತ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ. ಜನ ಸುರಾಜ್ ಪಕ್ಷದ ಬೆಂಬಲಿಗ ದುಲರ್‌ಚಂದ್ ಯಾದವ್ ಅವರನ್ನು ಹತ್ಯೆ ಮಾಡಿದ್ದಕ್ಕಾಗಿ ಅನಂತ್ ಸಿಂಗ್ ಅವರನ್ನು ಭಾನುವಾರಷ್ಟೇ ಬಂಧಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.