
ಕೆ. ಚಂದ್ರಶೇಖರ್ ರಾವ್
ಹೈದರಾಬಾದ್: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಭಾನುವಾರ ವಿಚಾರಣೆಗೊಳಪಡಿಸಿತು.
ಹಿಂದಿನ ಬಿಆರ್‌ಎಸ್ ಅವಧಿಯಲ್ಲಿನ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಮುಖ್ಯಸ್ಥರ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ತಂಡವು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಬಿಆರ್‌ಎಸ್ ಪಕ್ಷದ ಬೆಂಬಲಿಗರು ನಿವಾಸದ ಹೊರಗಡೆ ಜಮಾಯಿಸಿದ್ದರು. ಮಾಜಿ ಸಿಎಂ ನಿವಾಸದ ಸಮೀಪ ಭಾರಿ ಭದ್ರತೆ ಏರ್ಪಡಿಸಲಾಗಿತ್ತು.
ಎಸ್‌ಐಟಿ ವಿಚಾರಣೆಯನ್ನು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ್ ಖಚಿತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆಆರ್‌ಎಸ್ ಮಗ ಕೆ.ಟಿ. ರಾಮರಾವ್, 'ಇದೊಂದು ಸುಳ್ಳು ಪ್ರಕರಣ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಲಾಗುತ್ತಿದೆ. ಕೆಸಿಆರ್ ಬಳಿ ಏನು ಕೇಳಿದ್ದಾರೆಂದು ತಿಳಿದಿಲ್ಲ' ಎಂದು ಹೇಳಿದ್ದಾರೆ.
'ಬಿಆರ್‌ಎಸ್ ಪಕ್ಷಕ್ಕೆ ಮಸಿ ಬಳಿಯಲು ಯತ್ನಿಸಲಾಗುತ್ತಿದೆ. ತನಿಖೆಗೆ ಕೆಸಿಆರ್ ಸಂಪೂರ್ಣವಾಗಿ ಸಹಕರಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಬಿಆರ್‌ಎಸ್ ಆಡಳಿತ ಅವಧಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಸೇರಿದಂತೆ ಗಣ್ಯವ್ಯಕ್ತಿಗಳ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.