ADVERTISEMENT

ಪಿಣರಾಯಿ ವಿಜಯನ್–ತರೂರ್ ಉಪಸ್ಥಿತಿ ಅನೇಕರಿಗೆ ನಿದ್ದೆಗೆಡಿಸಲಿದೆ: ಮೋದಿ ವ್ಯಂಗ್ಯ

ಪಿಟಿಐ
Published 2 ಮೇ 2025, 11:14 IST
Last Updated 2 ಮೇ 2025, 11:14 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

––ಪಿಟಿಐ ಚಿತ್ರ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಸಮ್ಮುಖದಲ್ಲಿ ‘ವಿಳಿಂಜಂ’ ಅಂತರರಾಷ್ಟ್ರೀಯ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ.

ADVERTISEMENT

ಇದೇ ವೇಳೆ ಮಾತನಾಡಿದ ಮೋದಿ, ‘ಪಿಣರಾಯಿ ವಿಜಯನ್ ಅವರು ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಬಣದ ಪ್ರಮುಖ ನಾಯಕರಾಗಿದ್ದಾರೆ. ಅವರು (ಪಿಣರಾಯಿ ವಿಜಯನ್) ಮತ್ತು ಶಶಿ ತರೂರ್ ಒಟ್ಟಿಗೆ ಬಂದರು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿರುವುದು ಅನೇಕರಿಗೆ (ವಿಪಕ್ಷ ನಾಯಕರಿಗೆ) ನಿದ್ದೆ ಕೆಡಿಸಲಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಅದಾನಿ ಸಮೂಹಕ್ಕೆ ಸೇರಿದ ಅದಾನಿ ಪೋರ್ಟ್ಸ್ (ಎಪಿಎಸ್​​ಇಝಡ್) ಈ ಆಳ ನೀರಿನ ಬಂದರನ್ನು (ವಿಳಿಂಜಂ) ಅಭಿವೃದ್ಧಿಪಡಿಸಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ನಡೆದ ಈ ಯೋಜನೆಯ ವೆಚ್ಚ ₹8,800 ಕೋಟಿ ಆಗಿದೆ.

ಈ ಐತಿಹಾಸಿಕ ಬಂದರಿನ ಮೊದಲ ಹಂತದ ಸೌಲಭ್ಯವನ್ನು ಮೋದಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ, ಎರಡನೇ ಹಂತದ ಬಂದರು ಯೋಜನೆಗೂ ಅವರು ಚಾಲನೆ ನೀಡಿದ್ದಾರೆ.

‘ವಿಳಿಂಜಂ’ ಬಂದರಿನ ಬಗ್ಗೆ ಮಾತನಾಡಿದ ಮೋದಿ, ‘ವಿಳಿಂಜಂ ಬಂದರನ್ನು ₹8,800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅದರ ಟ್ರಾನ್ಸ್‌ಶಿಪ್‌ಮೆಂಟ್ ಹಬ್ (ಹಡಗಿನಿಂದ ಹಡಗಿಗೆ ಸರಕು ಸಾಕಿಸುವ ಬಂದರು) ಸಾಮರ್ಥ್ಯವು ಮೂರು ಪಟ್ಟು ಹೆಚ್ಚಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಇದು ದೊಡ್ಡ ಸರಕು ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ನಿರ್ಣಾಯಕ ಅಗತ್ಯವನ್ನು ಪೂರೈಸುತ್ತದೆ. ಇಲ್ಲಿಯವರೆಗೆ ಭಾರತದ ಶೇಕಡ 75ರಷ್ಟು ಸಾಗಣೆ ವ್ಯವಹಾರಗಳನ್ನು ವಿದೇಶಿ ಬಂದರುಗಳಲ್ಲಿ ನಡೆಸಲಾಗುತ್ತಿತ್ತು. ಇದರಿಂದಾಗಿ ದೇಶಕ್ಕೆ ಗಮನಾರ್ಹ ಆದಾಯ ನಷ್ಟವಾಗಿದೆ. ಇದೀಗ ವಿಳಿಂಜಂ ಬಂದರು ಉದ್ಘಾಟನೆಯಾಗಿರುವುದರಿಂದ ನಮ್ಮ ದೇಶ ಎದುರಿಸುತ್ತಿರುವ ಆದಾಯ ನಷ್ಟವನ್ನು ಸರಿದೂಗಿಸಲು ನೆರವಾಗಲಿದೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾವಿಕರ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಬಂದರುಗಳ ಸಾಮರ್ಥ್ಯವು ದ್ವಿಗುಣಗೊಂಡಿದ್ದು, ಅವುಗಳ ದಕ್ಷತೆ ಸುಧಾರಿಸಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.