ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅವರು ದಿಯುನಲ್ಲಿ ಬುಧವಾರ ನಡೆದ ಸಹೋದರ ಅಜಯ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು
–ಪಿಟಿಐ ಚಿತ್ರ
ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 190 ಮಂದಿಯ ಗುರುತು ಪತ್ತೆಯಾಗಿದ್ದು, 32 ಮಂದಿ ವಿದೇಶಿಗರೂ ಸೇರಿದಂತೆ 159 ಜನರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
‘ಭೀಕರ ವಿಮಾನ ಅವಘಡದಲ್ಲಿ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಉಳಿದವರ ಗುರುತು ಪತ್ತೆಗೆ ಡಿಎನ್ಎ ತಾಳೆ ನೋಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ತಿಳಿಸಿದರು.
ಕುಟುಂಬಸ್ಥರಿಗೆ ಹಸ್ತಾಂತರಿಸಲಾದ 127 ಭಾರತೀಯರ ಮೃತದೇಹಗಳ ಪೈಕಿ, 123 ಮಂದಿ ವಿಮಾನದ ಪ್ರಯಾಣಿಕರಾಗಿದ್ದರೆ, ನಾಲ್ವರು ಘಟನಾ ಸ್ಥಳದಲ್ಲಿದ್ದ ದುರ್ದೈವಿಗಳು ಎಂದು ಅವರು ತಿಳಿಸಿದರು.
ವಿಮಾನ ಪತನದ ಸಂದರ್ಭದಲ್ಲಿ ಗಾಯಗೊಂಡು 71 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಏಳು ಮಂದಿ ಮಾತ್ರ ಅಹಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯಿಂದ ವಿಶ್ವಾಸ್ ಬಿಡುಗಡೆ
ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅವರು ಗುಣಮುಖರಾಗಿದ್ದು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಿಂದ ಬುಧವಾರ ನಿರ್ಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಬಳಿಕ ಅವರು ಅವಘಡದಲ್ಲಿ ಮೃತಪಟ್ಟ ಸಹೋದರ ಅಜಯ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು. ವಿಶ್ವಾಸ್ ಮತ್ತು ಅಜಯ್ ಅವರು ಮೂಲತಃ ಕೇಂದ್ರಾಡಳಿತ ಪ್ರದೇಶವಾದ ದಿಯುನವರು. ಕುಟುಂಬಸ್ಥರೊಂದಿಗೆ ಕೆಲ ದಿನ ಕಾಲಕಳೆದ ನಂತರ ಜೂನ್ 12ರಂದು ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್‌ಗೆ ಮರಳುತ್ತಿದ್ದರು. ವಿಶ್ವಾಸ್ ಅವರು ಅಜಯ್ ಅವರ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತು ಚಿತಾಗಾರಕ್ಕೆ ಒಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.