ADVERTISEMENT

ಹೊಸ ಸಂಸತ್‌ ಭವನ: ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ಸಾಧ್ಯತೆ

ಪ್ರಧಾನಿಯವರ ಲಭ್ಯತೆ ಆಧರಿಸಿ ದಿನಾಂಕ ನಿರ್ಧಾರ

ಪಿಟಿಐ
Published 25 ನವೆಂಬರ್ 2020, 7:19 IST
Last Updated 25 ನವೆಂಬರ್ 2020, 7:19 IST
ಸಂಸತ್ ಭವನ–ಸಾಂದರ್ಭಿಕ ಚಿತ್ರ
ಸಂಸತ್ ಭವನ–ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಹೊಸ ಸಂಸತ್ತ ಭವನ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶಂಕುಸ್ಥಾಪನೆ ದಿನಾಂಕ ಡಿಸೆಂಬರ್ 10ರ ಆಸುಪಾಸಿನಲ್ಲಿ ನಿಗದಿಯಾಗುವ ಸೂಚನೆಗಳಿದ್ದರೂ, ಪ್ರಧಾನಿಯವರ ಲಭ್ಯತೆ ಆಧರಿಸಿ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

‘ಹೊಸ ಸಂಸತ್‌ ಭವನದ ಕಾಮಗಾರಿ ಆರಂಭಿಸುವ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಮತ್ತು ಬಿ.ಆರ್‌.ಅಂಬೇಡ್ಕರ್ ಸೇರಿದಂತೆ ಸಂಸತ್ತಿನ ಆವರಣದಲ್ಲಿರುವ ಐದು ಪುತ್ಥಳಿಗಳನ್ನೂ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಹೊಸ ಸಂಸತ್ ಭವನ ಆವರಣದ ಪ್ರಮುಖ ತಾಣಗಳಲ್ಲಿ ಈ ಪುತ್ಥಳಿಗಳನ್ನು ಮರು ಸ್ಥಾಪಿಸಲಾಗುತ್ತದೆ‘ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸೆಂಟ್ರಲ್ ವಿಸ್ತಾ ರೀಡೆವಲಪ್‌ಮೆಂಟ್ ಯೋಜನೆಯಡಿ ಈಗಿರುವ ಸಂಸತ್‌ ಭವನದ ಕಟ್ಟಡದ ಸಮೀಪದಲ್ಲೇ ಹೊಸ ಸಂಸತ್‌ ಭವನ ನಿರ್ಮಾಣ ಮಾಡಲಾಗುತ್ತದೆ. ನಿರ್ಮಾಣ ಕಾರ್ಯ ಆರಂಭವಾದ 21 ತಿಂಗಳಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ತ್ರಿಕೋನ ಆಕಾರದಲ್ಲಿ ನಿರ್ಮಾಣವಾಗಲಿರುವ ಹೊಸ ಸಂಸತ್ ಭವನದ ಜತೆಗೆ ಕೇಂದ್ರೀಯ ಸಚಿವಾಲಯಗಳ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ ಉದ್ದದ ರಾಜ್‌ಪತ್‌ ಮಾರ್ಗವನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.