ADVERTISEMENT

ಮನ್‌ ಕಿ ಬಾತ್‌| ಸೆಪ್ಟೆಂಬರ್‌ ತಿಂಗಳನ್ನು ‘ಪೋಷಣಾ ಮಾಸ’ವಾಗಿ ಆಚರಿಸಲು ಮೋದಿ ಕರೆ

ಪಿಟಿಐ
Published 28 ಆಗಸ್ಟ್ 2022, 6:50 IST
Last Updated 28 ಆಗಸ್ಟ್ 2022, 6:50 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ‘ಅಪೌಷ್ಟಿಕತೆಯನ್ನು ಹೋಗಲಾಡಿಸಲು ಜನರು ಪ್ರಯತ್ನಿಸಬೇಕು. ಸಾಮಾಜಿಕ ಜಾಗೃತಿಯು ಈ ಹೋರಾಟದ ನಿರ್ಣಾಯಕ ಅಂಶವಾಗಿದೆ. ಸೆಪ್ಟೆಂಬರ್‌ ತಿಂಗಳನ್ನು ಪೋಷಣಾ ಮಾಸವಾಗಿ ಆಚರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿರುವ ನರೇಂದ್ರ ಮೋದಿ, ‘ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮದ ಅಂಗವಾಗಿ ನಡೆದ 'ಅಮೃತ್ ಮಹೋತ್ಸವ'ದ 'ಅಮೃತ್ ಧಾರೆ'ಯು ಈ ತಿಂಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಹರಿಯುತ್ತಿದೆ’ ಎಂದೂ ಅವರು ಹೇಳಿದರು.

ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ ಎಂದು ಅವರು ಹೇಳಿದರು.

ADVERTISEMENT

ಅಪೌಷ್ಟಿಕತೆಯ ವಿರುದ್ಧ ಮುಂದಿನ ತಿಂಗಳು ನಡೆಯುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮೋದಿ ನಾಗರಿಕರಿಗೆ ಮನವಿ ಮಾಡಿದರು.

‘ಹಬ್ಬಗಳ ಜೊತೆಗೆ, ಸೆಪ್ಟೆಂಬರ್ ಅನ್ನು ಪೌಷ್ಟಿಕತೆಗೆ ಸಂಬಂಧಿಸಿದ ದೊಡ್ಡ ಅಭಿಯಾನಕ್ಕೆ ಮೀಸಲಿಡಲಾಗಿದೆ. ನಾವು ಸೆಪ್ಟೆಂಬರ್ 1 ರಿಂದ 30ರ ವರೆಗೆ 'ಪೋಷಣಾ ಮಾಸ' ಅಥವಾ ಪೌಷ್ಟಿಕಾಂಶದ ತಿಂಗಳಾಗಿ ಆಚರಿಸಬೇಕು’ ಎಂದು ಮೋದಿ ತಿಳಿಸಿದರು.

’ಅಪೌಷ್ಟಿಕತೆಯ ವಿರುದ್ಧ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಅವರು ಇದೇ ವೇಳೆ ಹೇಳಿದರು.

‘ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು 'ಪೋಷಣಾ ಅಭಿಯಾನ'ದ ಪ್ರಮುಖ ಭಾಗವಾಗಿರಲಿದೆ. ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವಲ್ಲಿ ಜಲ ಜೀವನ್ ಮಿಷನ್ ದೊಡ್ಡ ಪರಿಣಾಮ ಬೀರಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ. ಜನರು ಅಪೌಷ್ಟಿಕತೆ ಹೋಗಲಾಡಿಸಲು ಪ್ರಯತ್ನಗಳನ್ನು ಮಾಡಬೇಕು’ ಎಂದು ಅವರು ಕೋರಿದರು.

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಎತ್ತಿ ತೋರಿಸುವ ‘ಸ್ವರಾಜ್’ ಧಾರಾವಾಹಿಯನ್ನು ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುವುದು. ಜನರು ಅದನ್ನು ವೀಕ್ಷಿಸುವಂತೆ ಪ್ರಧಾನಿ ಜನರಿಗೆ ತಿಳಿಸಿದ್ದಾರೆ.

‘ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರರ ಶ್ರಮವನ್ನು ದೇಶದ ಯುವ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ’ ಎಂದು ಅವರು ಇದೇ ವೇಳೆ ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.