
ನರೇಂದ್ರ ಮೋದಿ
ಪಿಟಿಐ ಚಿತ್ರ
ಸೀತಾಮಢಿ/ ಬೆತಿಯಾ (ಬಿಹಾರ): ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ದುರಾಡಳಿತ ಮತ್ತು ಹಿಂಸಾಚಾರ ಮರುಕಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದರು.
ಸೀತಾಮಢಿ ಮತ್ತು ಬೆತಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ಎನ್‌ಡಿಎ ಅಧಿಕಾರಿಕ್ಕೇರಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಖಾತರಿಪಡಿಸುತ್ತದೆ ಮತ್ತು ನವೋದ್ಯಮಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಪ್ರತಿಪಾದಿಸಿದರು.
‘ಮಕ್ಕಳು ದೊಡ್ಡವರಾದ ಮೇಲೆ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯಬೇಕು ಎಂದು ಆರ್‌ಜೆಡಿ ಬಯಸುತ್ತದೆ. ಅವರು ಅಧಿಕಾರಕ್ಕೇರಿದರೆ ಜನರ ತಲೆಗೆ ‘ಕಟ್ಟಾ’ (ನಾಡ ಬಂದೂಕು) ಗುರಿಯಿಟ್ಟು ಬೆದರಿಸುತ್ತಾರೆ. ಕ್ರೌರ್ಯ ಮತ್ತು ಭ್ರಷ್ಟಾಚಾರ ತುಂಬಿರುವಂತಹ ಸರ್ಕಾರವನ್ನು ಬಿಹಾರದ ಜನರು ಖಂಡಿತವಾಗಿಯೂ ಬಯಸುವುದಿಲ್ಲ’ ಎಂದು ಹೇಳಿದರು.
‘ತಲೆಗೆ ಬಂದೂಕು ಹಿಡಿದು ಬೆದರಿಸುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಸ್ಕೂಲ್ ಬ್ಯಾಗ್, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಮತ್ತು ಹಾಕಿ ಸ್ಟಿಕ್‌ಗಳನ್ನು ನೀಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೇರಬೇಕೆಂದು ಬಯಸುತ್ತಿದ್ದಾರೆ’ ಎಂದರು.
‘ಮೊದಲ ಹಂತದಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ನಡೆದಿರುವುದು ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ. ನವೆಂಬರ್ 11ರಂದು ಎರಡನೇ ಹಂತದಲ್ಲಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು’ ಎಂದು ಜನರಿಗೆ ಮನವಿ ಮಾಡಿದರು.
'ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ ಹೊಂದಲು ಉತ್ತೇಜಿಸುವ ಎನ್‌ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಶೇ 65.08ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ವಿರೋಧಿಗಳಿಗೆ 65 ವೋಲ್ಟ್‌ನ ಆಘಾತ ನೀಡಿದಂತಾಗಿದೆ. ಹೀಗಾಗಿ ಅವರು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ’ ಎಂದು ಮೋದಿ ವಿರೋಧಿಗಳ ಕಾಲೆಳೆದಿದ್ದಾರೆ.
‘ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ ಮೂಲಕ ಪ್ರತಿ ಮಹಿಳೆಯ ಖಾತೆಗೆ ₹10 ಸಾವಿರ ನಗದನ್ನು ನೇರ ವರ್ಗಾವಣೆ ಮಾಡಲಾಗಿದೆ. ‘ಜಂಗಲ್ ರಾಜ್’ ನಡೆಸುವವರು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕಾಂಗ್ರೆಸ್‌ನ ನಾಮ್‌ದಾರ್ (ರಾಹುಲ್ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ) ಹಿಂದೆ ಪ್ರಧಾನಿಯಾಗಿದ್ದಾಗ ಒಂದು ಮಾತು ಹೇಳಿದ್ದರು. ಸರ್ಕಾರ ನೀಡುವ ಪ್ರತಿ ₹1ರಲ್ಲಿ ಕೇವಲ 15 ಪೈಸೆ ಮಾತ್ರ ಜನರನ್ನು ತಲುಪುತ್ತಿದೆ. ಈ ಲೂಟಿಯ ಹಿಂದೆ ರಕ್ತಸಿಕ್ತ ಕೈಗಳಿವೆ’ ಎಂದು ಆರೋಪಿಸಿದರು.
‘ಎನ್‌ಡಿಎ ಸರ್ಕಾರವು ಸೀತಾ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಿದೆ. ಆದರೆ ಕಾಂಗ್ರೆಸ್‌ನ ನಾಮ್‌ದಾರ್ ಅವರು ಛತ್ ಪೂಜೆಯನ್ನು ‘ನೌಟಂಕಿ’ (ನಾಟಕ) ಎಂದು ಹೇಳಿ ಅವಮಾನಿಸಿದ್ದಾರೆ. ಇದು ಹಿಂದೂಗಳ ಭಾವನೆಗೆ ಆದ ಘಾಸಿಯಲ್ಲವೇ? ಅದಕ್ಕಾಗಿ ಅವರಿಗೆ ಅವಮಾನ ಆಗಬೇಕಲ್ಲವೇ? ಪ್ರಜಾಪ್ರಭುತ್ವದಲ್ಲಿ ಇದಕ್ಕೆ ನೀಡುವ ಬಹುದೊಡ್ಡ ಶಿಕ್ಷೆ ಎಂದರೆ ಅವರಿಗೆ ಮತ ಹಾಕದಿರುವುದು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ತಮ್ಮ ಮತ ಬ್ಯಾಂಕ್ ಭದ್ರತೆಗಾಗಿ ಆರ್‌ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು. ಮಹಾ ಕುಂಭಮೇಳದಲ್ಲೂ ಇವರು ಪಾಲ್ಗೊಂಡಿರಲಿಲ್ಲ. ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿರುವ ಮಾತಾ ಶಬರಿ, ಮಹರ್ಷಿ ವಾಲ್ಮೀಕಿ ಹಾಗೂ ನಿಶಾದ್ ರಾಜ್ ದೇಗುಲಗಳ ಉದ್ಘಾಟನೆಗೂ ಇವರು ಬರಲಿಲ್ಲ. ಮತ ಬ್ಯಾಂಕ್‌ಗಾಗಿ ರಾಜಕೀಯ ಮಾಡುವವರು ಎಂದಿಗೂ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಇವರೇನಿದ್ದರೂ ನುಸುಳುಕೋರರಿಗೆ ನೆರವಾಗುವವರು’ ಎಂದು ವಿರೋಧ ಪಕ್ಷದವರನ್ನು ಮೋದಿ ಜರಿದರು.
ಹುದ್ದೆಯ ಘನತೆ ಕಾಯ್ದುಕೊಳ್ಳದ ಪ್ರಧಾನಿ: ಪ್ರಿಯಾಂಕಾ
ಕಟಿಹಾರ್: ಚುನಾವಣಾ ಪ್ರಚಾರ ಸಭೆಯಲ್ಲಿ ‘ಕಟ್ಟಾ’ (ನಾಡ ಪಿಸ್ತೂಲ್) ಮುಂತಾದ ಪದಗಳನ್ನು ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಯನ್ನು ಕಾಯ್ದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಟೀಕಿಸಿದರು.
ಕಟಿಹಾರ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು ‘ಮಹಾತ್ಮಾ ಗಾಂಧಿ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡಿದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಹೋರಾಟ ನಡೆಸುತ್ತಿದೆ’ ಎಂದರು. ಒಂದೆಡೆ ಪ್ರಧಾನಿ ಅವರು ಅಹಿಂಸೆಯನ್ನು ಪ್ರತಿಪಾದಿಸುವ ‘ವಂದೇ ಮಾತರಂ’ ಗೀತೆಯನ್ನು ಶ್ಲಾಘಿಸುತ್ತಿದ್ದರೆ ಮತ್ತೊಂದೆಡೆ ಅವರು ‘ಕಟ್ಟಾ’ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಎನ್‌ಡಿಎ ಸರ್ಕಾರವನ್ನು ಟೀಕಿಸಿದ ಅವರು ‘ಯುವಕರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಮೋದಿ ಅವರು ಸಾರ್ವಜನಿಕ ವಲಯದ ಉದ್ಯಮಗಳನ್ನು ಕಾರ್ಪೊರೇಟ್ ವಲಯದ ಇಬ್ಬರು ಸ್ನೇಹಿತರಿಗೆ ಹಸ್ತಾಂತರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮಹಿಳೆಯರಿಗೆ ₹10 ಸಾವಿರ ನೀಡಿ ಮತಗಳನ್ನು ಪಡೆಯಬಹದು ಎಂದು ಬಿಜೆಪಿ ಭಾವಿಸಿದೆ’ ಎಂದರು.
ನುಸುಳುಕೋರರ ಗಡಿಪಾರು: ಶಾ
ಪೂರ್ಣಿಯಾ: ಬಿಹಾರದ ಸೀಮಾಂಚಲ ಪ್ರದೇಶವನ್ನು ನುಸುಳುಕೋರರ ಸುರಕ್ಷಿತ ತಾಣವನ್ನಾಗಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಆರೋಪಿಸಿದರು.
ಪೂರ್ಣಿಯಾ ಮತ್ತು ಕಟಿಹಾರ್‌ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ನಾವು ಪ್ರತಿಯೊಬ್ಬ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕುತ್ತೇವೆ ಹಾಗೂ ಅವರ ದೇಶಕ್ಕೆ ಗಡಿಪಾರು ಮಾಡುತ್ತೇವೆ’ ಎಂದರು.
ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನವನ್ನು ಉಲ್ಲೇಖಿಸಿದ ಅವರು ‘ರಾಜ್ಯದ ಅರ್ಧದಷ್ಟು ಭಾಗವು ಈಗಾಗಲೇ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟಕ್ಕೆ ನಿರ್ಗಮನದ ಬಾಗಿಲು ತೋರಿಸಿದೆ. ಎನ್‌ಡಿಎ 160ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೇರಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.