ರಾಂಚಿ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ– ‘ಆಯುಷ್ಮಾನ್ ಭಾರತ’ವನ್ನು ಬಡವರ ಸೇವೆಗಾಗಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಯೋಜನೆಗೆ ಭಾನುವಾರ ಚಾಲನೆ ನೀಡಿದ ಅವರು, ವಿಶ್ವದಲ್ಲಿಯೇ ಸರ್ಕಾರವೊಂದು ಜಾರಿಗೆ ತಂದಿರುವ ದೊಡ್ಡ ಆರೋಗ್ಯ ಯೋಜನೆ ಇದಾಗಿದೆ. ಕೆನಡಾ, ಮೆಕ್ಸಿಕೊ, ಅಮೆರಿಕದ ಒಟ್ಟು ಜನಸಂಖ್ಯೆಯಷ್ಟು ಈ ಯೋಜನೆಯ ಫಲಾನುಭವಿಗಳಿದ್ದಾರೆ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಬಡವರನ್ನು ಸಶಕ್ತರನ್ನಾಗಿ ಮಾಡದೇ ಕೇವಲ ಮತ ಬ್ಯಾಂಕ್ ರಾಜಕೀಯ ಮಾಡುತ್ತಾ ಬಂದಿತ್ತು. ಆದರೆ, ಬಿಜೆಪಿ ಸರ್ಕಾರ ಬಡವರು, ದುರ್ಬಲ ವರ್ಗದವರನ್ನು ಸಶಕ್ತರನ್ನಾಗಿಸಲು ಆದ್ಯತೆ ನೀಡಿದೆ ಎಂದರು.
ಹೃದಯ ರೋಗ, ಯಕೃತ್ ಸಮಸ್ಯೆ, ಮಧುಮೇಹ ಸೇರಿದಂತೆ ಒಟ್ಟು 1,300ಕ್ಕಿಂತ ಹೆಚ್ಚು ಆರೋಗ್ಯ ಸೇವೆಗಳು ಈ ಯೋಜನೆ ವ್ಯಾಪ್ತಿಯಲ್ಲಿ ಸಿಗಲಿವೆ ಎಂದ ಅವರು, ‘ಕೆಲವರು ಇದನ್ನು ಮೋದಿ ಕೇರ್, ಮತ್ತಿತರ ಹೆಸರುಗಳಿಂದ ಕರೆಯುತ್ತಿದ್ದಾರೆ. ಆದರೆ, ಬಡವರ ಸೇವೆಗೆ ಸಿಕ್ಕ ಅಪೂರ್ವ ಅವಕಾಶ ಇದು. ಸಮಾಜದ ಎಲ್ಲರೂ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ’ ಎಂದು ಹೇಳಿದರು.
‘ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾಗಬಾರದು ಎಂದು ಪ್ರಾರ್ಥಿಸುತ್ತೇನೆ. ಒಂದು ವೇಳೆ ಸಮಸ್ಯೆ ಬಂದರೆ ಅವರಿಗೆ ಈ ಯೋಜನೆಯ ಸೇವೆ ಸಿಗಲಿದೆ. ಉಳ್ಳವರಿಗೆ ಸಿಗುವ ಎಲ್ಲ ಸೌಲಭ್ಯಗಳುದೇಶದ ಬಡಜನರಿಗೂ ದೊರೆಯಬೇಕು’ ಎಂದು ಹೇಳಿದರು.
**
ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ 2,500 ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಗಳು ಬರಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
–ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.