
ನರೇಂದ್ರ ಮೋದಿ
ಕಲಿಯಾಬೋರ್: ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವೋಟ್‌ಗಾಗಿ ಅಸ್ಸಾಂನ ಭೂಮಿಯನ್ನು ನುಸುಳುಕೋರರಿಗೆ ಬಿಟ್ಟುಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನಲ್ಲಿ ಚುನಾವಣೆ ಇರುವುದರಿಂದ ಕಲಿಯಾಬೋರ್‌ನಲ್ಲಿ ರ್‍ಯಾಲಿ ನಡೆಸಿದ ಮೋದಿಯವರು, ಜನರನ್ನು ಉದ್ದೇಶಿಸಿ ಮಾತನಾಡಿದರು. ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಗಡಿಯೊಳಗೆ ಅಕ್ರಮ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿತ್ತು. ಅವರು ಅರಣ್ಯ ಪ್ರದೇಶ ಹಾಗೂ ಸಾಂಪ್ರದಾಯಿಕ ಸಂಸ್ಥೆಗಳನ್ನು ಅತಿಕ್ರಮಿಸಿದ್ದಾರೆ ಎಂದರು.
‘ಅಸ್ಸಾಂನ ಭೂಮಿಯನ್ನು ಅತಿಕ್ರಮಿಸಿದ ನುಸುಳುಕೋರರನ್ನು ಹೊರಹಾಕುವ ಮೂಲಕ ಬಿಜೆಪಿ ಸರ್ಕಾರ ಇಲ್ಲಿನ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತಿದೆ‘ ಎಂದು ಹೇಳಿದರು.
‘ನುಸುಳುಕೋರರು ಜನಸಂಖ್ಯಾ ಸಮತೋಲನವನ್ನು ಹಾಳು ಮಾಡುತ್ತಿದ್ದಾರೆ. ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ. ಬಡವರು ಮತ್ತು ಯುವಕರಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಬುಡಕಟ್ಟು ಪ್ರದೇಶಗಳಲ್ಲಿ ಭೂಮಿಯನ್ನು ಮೋಸದಿಂದ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದು ಅಸ್ಸಾಂ ಮತ್ತು ರಾಷ್ಟ್ರದ ಭದ್ರತೆ ಎರಡಕ್ಕೂ ಗಂಭೀರ ಅಪಾಯವನ್ನುಂಟುಮಾಡುತ್ತಿದೆ’ ಎಂದು ಪ್ರಧಾನಿ ಹೇಳಿದರು.
‘ಒಳನುಸುಳುಕೋರರ ರಕ್ಷಣೆ ಮತ್ತು ಅಧಿಕಾರ ಪಡೆಯುವುದನ್ನೇ ತನ್ನ ನೀತಿಯನ್ನಾಗಿಸಿಕೊಂಡಿರುವ ಕಾಂಗ್ರೆಸ್ ಕುರಿತು ಜನರು ಜಾಗರೂಕರಾಗಿರಬೇಕು’ ಎಂದು ಎಚ್ಚರಿಸಿದರು.
‘ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶದಾದ್ಯಂತ ಇದೇ ನೀತಿಯನ್ನು ಅನುಸರಿಸುತ್ತಿವೆ. ಬಿಹಾರ ಚುನಾವಣೆ ಸಂದರ್ಭದಲ್ಲಿ ಒಳನುಸುಳುಕೋರರನ್ನು ರಕ್ಷಿಸಲು ರ್‍ಯಾಲಿಗಳನ್ನು ಆಯೋಜಿಸಿದ್ದರು. ಆದರೆ, ಅಲ್ಲಿನ ಜನರು ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಸ್ಸಾಂನ ಜನರು ಕೂಡ ಅವರಿಗೆ ಸರಿಯಾದ ತಿರುಗೇಟು ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
‘ಋಣಾತ್ಮಕ ರಾಜಕೀಯದ ಸಂದೇಶ ನೀಡುವ ಮೂಲಕ ಕಾಂಗ್ರೆಸ್, ಜನರ ನಂಬಿಕೆ ಕಳೆದುಕೊಂಡಿದೆ. ಹಾಗಾಗಿ ಬಿಜೆಪಿಯು ದೇಶದ ಜನರ ಮೊದಲ ಆಯ್ಕೆಯಾಗಿದೆ’ ಎಂದು ಪ್ರಧಾನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.