ADVERTISEMENT

28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2022, 15:16 IST
Last Updated 8 ಸೆಪ್ಟೆಂಬರ್ 2022, 15:16 IST
ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ
ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ   

ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನಾವರಣಗೊಳಿಸಿದರು.

28 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು.

280 ಮೆಟ್ರಿಕ್ ಟನ್ ತೂಕದ ಕಪ್ಪು ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿರುವ ಈ ಪ್ರತಿಮೆಯನ್ನು ಕೇಂದ್ರದ ಸೆಂಟ್ರಲ್‌ ವಿಸ್ತಾ ಯೋಜನೆಯಡಿ ₹13,450 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ADVERTISEMENT

ಕರ್ತವ್ಯಪಥ’ಕ್ಕೆ ಮೋದಿ ಚಾಲನೆ
ದೆಹಲಿಯ ಐತಿಹಾಸಿಕ ‘ರಾಜಪಥ’ಕ್ಕೆ ‘ಕರ್ತವ್ಯಪಥ’ ಎಂದು ಮರುನಾಮಕರಣ ಮಾಡಲಾಗಿದ್ದು, ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮಾರ್ಗಕ್ಕೆ ಈ ಮೊದಲು ‘ರಾಜಪಥ’ ಎಂದು ಹೆಸರಿಡಲಾಗಿತ್ತು. ಇದಕ್ಕೆ ‘ಕರ್ತವ್ಯಪಥ’ ಎಂದು ಮರುನಾಮಕರಣ ಮಾಡುವ ಕುರಿತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವುನ್ಯೂ ಡೆಲ್ಲಿ ಮುನ್ಸಿಪಲ್‌ ಕೌನ್ಸಿಲ್‌ಗೆ (ಎನ್‌ಡಿಎಂಸಿ) ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರದ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಎನ್‌ಡಿಎಂಸಿ ವಿಶೇಷ ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು.

‘ಕರ್ತವ್ಯಪಥ’ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಿಗೆ ಕೆಂಪು ವರ್ಣದ ಗ್ರಾನೈಟ್‌ ಅಳವಡಿಸಲಾಗಿದ್ದು, ಕಾಲುವೆಗಳನ್ನು ನವೀಕರಿಸಲಾಗಿದೆ. ಈ ಹಾದಿಯಲ್ಲಿ ರಾಜ್ಯವಾರು ಆಹಾರದ ಮಳಿಗೆಗಳು ಹಾಗೂ ವಾಹನ ನಿಲುಗಡೆ ವ್ಯವ‌ಸ್ಥೆ ಇದೆ. ಗಡಿಯಾರದ ಮಾದರಿಯಲ್ಲಿ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. ರಸ್ತೆ ಸುತ್ತಲಿನ ಪ್ರದೇಶವು ಹಸಿರಿನಿಂದ ಕೂಡಿದೆ.

ಸಿಪಿಡಬ್ಲ್ಯುಡಿ ಈ ಮಾರ್ಗದಲ್ಲಿ ಐದು ಮಾರಾಟ ವಲಯಗಳನ್ನು ಸ್ಥಾಪಿಸಿದ್ದು, ಇಲ್ಲಿ ಮಳಿಗೆಗಳನ್ನು ಇಡಲು ತಲಾ 40 ಮಂದಿಗೆ ಅವಕಾಶ ನೀಡಲಾಗುತ್ತದೆ. ಇಂಡಿಯಾ ಗೇಟ್‌ ಬಳಿಯ ಎರಡು ಬ್ಲಾಕ್‌ಗಳಲ್ಲಿ ತಲಾ ಎಂಟು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.ಸೆಂಟ್ರಲ್‌ ವಿಸ್ತಾ ಅಭಿವೃದ್ಧಿ ಯೋಜನೆಯಡಿ ಇಡೀ ಮಾರ್ಗಕ್ಕೆ ಹೊಸ ರೂಪ ನೀಡಲಾಗಿದೆ.

‘ರಾಜಪಥವು ಶಕ್ತಿಯ ಸಂಕೇತವಾಗಿತ್ತು. ಆದರೆ ಕರ್ತವ್ಯಪಥ ಸಾರ್ವಜನಿಕರ ಒಡೆತನ ಮತ್ತು ಸಬಲೀಕರಣಕ್ಕೆ ಉದಾಹರಣೆಯಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ಕರ್ತವ್ಯಪಥದ ಸುತ್ತಲಿನ ಪ್ರದೇಶದಲ್ಲಿ ಒಟ್ಟು 1,125 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಂಡಿಯಾ ಗೇಟ್‌ ಬಳಿ 35 ಬಸ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ. ಹೊಸದಾಗಿ 900ಕ್ಕೂ ಅಧಿಕ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.