ADVERTISEMENT

ಹಾಸ್ಯನಟ ಗೋವರ್ಧನ್ ಅಸರಾನಿ ನಿಧನ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರ ಸಂತಾಪ

ಪಿಟಿಐ
Published 21 ಅಕ್ಟೋಬರ್ 2025, 5:13 IST
Last Updated 21 ಅಕ್ಟೋಬರ್ 2025, 5:13 IST
<div class="paragraphs"><p>ಗೋವರ್ಧನ್ ಅಸರಾನಿ</p></div>

ಗೋವರ್ಧನ್ ಅಸರಾನಿ

   

ನವದೆಹಲಿ: ಬಾಲಿವುಡ್‌ ಹಾಸ್ಯನಟ ಗೋವರ್ಧನ್ ಅಸರಾನಿ (84) ಅವರು ವಯೋಸಹಜ ಕಾಯಿಲೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗೋವರ್ಧನ್ ಅಸರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಸಚಿವ ಕಿರಣ್‌ ರಿಜಿಜು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗೋವರ್ಧನ್ ಅಸರಾನಿ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪ್ರತಿಭಾನ್ವಿತ ಮನರಂಜನೆ ಮತ್ತು ಬಹುಮುಖ ಕಲಾವಿದರಾಗಿದ್ದ ಅವರು ತಲೆಮಾರುಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಸರಾನಿ ಅವರು ತಮ್ಮ ಮರೆಯಲಾಗದ ಅಭಿನಯದ ಮೂಲಕ ಅಸಂಖ್ಯಾತ ಜೀವನಗಳಿಗೆ ಸಂತೋಷ ಮತ್ತು ನಗುವನ್ನು ತರಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಖ್ಯಾತ ನಟ ಅಸರಾನಿ ಜಿ ಅವರ ನಿಧನ ತೀವ್ರ ದುಃಖ ತಂದಿದೆ. ಅಸರಾನಿ ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಜತೆಗೆ, ಹಾಸ್ಯದ ಮೂಲಕ ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸಲು ಶಕ್ತಿಯನ್ನು ನೀಡಲಿ. ಓಂ ಶಾಂತಿ’ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಟ ಗೋವರ್ಧನ್ ಅಸರಾನಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಅಪ್ರತಿಮ ಬಹುಮುಖ ಪ್ರತಿಭೆ ಮತ್ತು ವಿಶಿಷ್ಟ ಹಾಸ್ಯಪ್ರಜ್ಞೆ ಲಕ್ಷಾಂತರ ಜನರಿಗೆ ಸಂತೋಷ ಮತ್ತು ನಗುವನ್ನು ತರಿಸಿದೆ. ‘ಶೋಲೆ’ ಚಿತ್ರದ ಐಕಾನಿಕ್ ಜೈಲರ್‌ನಿಂದ ಹಿಡಿದು ಚುಪ್ಕೆ ಚುಪ್ಕೆ, ಗೋಲ್‌ಮಾಲ್, ಆಪ್ ಕಿ ಕಸಮ್, ಅಭಿಮಾನ್, ಬ್ಯಾಟನ್ ಬ್ಯಾಟನ್ ಮೇ, ಛೋಟಿ ಸಿ ಬಾತ್, ಧಮಾಲ್ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳವರೆಗೆ ಅವರ ಅಭಿನಯವು ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ನೆನಪು. ಅಸರಾನಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಅಸರಾನಿ ಜಿ ಅವರ ನಿಧನದಿಂದ ಮೂಕವಿಸ್ಮಿತರಾಗಿದ್ದೇವೆ. ಕೇವಲ ಒಂದು ವಾರದ ಹಿಂದೆ ‘ಹೈವಾನ್’ ಚಿತ್ರೀಕರಣದ ಸಮಯದಲ್ಲಿ ನಾವು ಅತ್ಯಂತ ಬೆಚ್ಚಗಿನ ಅಪ್ಪುಗೆಯನ್ನು ಹಂಚಿಕೊಂಡಿದ್ದೆವು. ಅವರು ಅಪಾರವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರು. ‘ಹೇರಾ ಫೆರಿ, ಭಾಗಮ್ ಭಾಗ್, ದೇ ದಾನ ದಾನ್, ವೆಲ್ಕಮ್ ಸೇರಿದಂತೆ ಇನ್ನಷ್ಟೇ ಬಿಡುಗಡೆಯಾಗಬೇಕಿರುವ 'ಭೂತ್ ಬಂಗ್ಲಾ', ‘ಹೈವಾನ್’ ಚಿತ್ರದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಬಹಳಷ್ಟು ಕಲಿತಿದ್ದೇನೆ. ಅಸರಾನಿ ಅವರ ಅಗಲಿಕೆ ನಮ್ಮ ಚಿತ್ರೋದ್ಯಮಕ್ಕೆ ಆದ ದೊಡ್ಡ ನಷ್ಟ’ ಎಂದು ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐದು ದಶಕಗಳ ಕಾಲ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅಸರಾನಿ, ‘ಶೋಲೆ’ ಚಿತ್ರದ ವಿಲಕ್ಷಣ ಜೈಲರ್ ಪಾತ್ರದ ಮೂಲಕ ಸದಾ ಜೀವಂತ. ಫಿಲ್ಮ್‌ಫೇರ್‌ ಸೇರಿದಂತೆ ಕೆಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅಸರಾನಿ, ಹಾಸ್ಯವಲ್ಲರಿಯ ‘ಟೈಮಿಂಗ್‌’ನಿಂದಾಗಿಯೇ ಗುರುತಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.