ADVERTISEMENT

ಮತ್ತೆ ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸಭೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2022, 7:50 IST
Last Updated 22 ಡಿಸೆಂಬರ್ 2022, 7:50 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬಿಎಫ್‌.7 ಸೋಂಕಿನ ಪ್ರಕರಣಗಳು ಗುಜರಾತ್‌ ಹಾಗೂ ಒಡಿಶಾದಲ್ಲಿ ತಲಾ ಎರಡೆರಡು ದೃಢಪಟ್ಟಿವೆ.

ದೇಶದಲ್ಲಿ ಕೊರೊನಾ ವೈರಸ್‌ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೋವಿಡ್‌: ಕಣ್ಗಾವಲು ಹೆಚ್ಚಳಕ್ಕೆ ಸೂಚನೆ
ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕಣ್ಗಾವಲು ಹೆಚ್ಚಿಸಲು ಹಾಗೂ ಲಸಿಕೀಕರಣಕ್ಕೆ ಒತ್ತು ನೀಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯಬುಧವಾರ ಸೂಚಿಸಿದೆ.

ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಸೇರಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಜ್ಞರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಚೀನಾ ಸೇರಿದಂತೆ ಇತರೆ ದೇಶಗಳಿಂದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಆಯ್ದ ಕೆಲವರನ್ನು ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಹಾಗೂ ಅಧಿಕಾರಿಗಳ ಸಭೆಯಲ್ಲಿ ದೇಶದಲ್ಲಿನ ಪರಿಸ್ಥಿತಿ ಅವಲೋಕಿಸಲಾಗಿದ್ದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತೂ ಚರ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.