ನವದೆಹಲಿ: ಪೆಗಾಸಸ್ ಕುತಂತ್ರಾಂಶ ವಿಚಾರಕ್ಕೆ ಸಂಬಂಧಿಸಿ ಚರ್ಚೆಗೆ ಸರ್ಕಾರ ಅವಕಾಶ ನೀಡದಿರುವುದು ಸಂಸತ್ ಕಲಾಪಕ್ಕೆ ಅಡ್ಡಿಯುಂಟಾಗಲು ಕಾರಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಸುಗಮ ಕಲಾಪ ನಡೆಯುವಂತೆ ಮಾಡಬೇಕು ಎಂದು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಆಗ್ರಹಿಸಿದ್ದಾರೆ.
ಗದ್ದಲದಿಂದಾಗಿ ಕಲಾಪದ ಸಮಯ ವ್ಯರ್ಥವಾಗಿರುವ ಕಾರಣ ಮುಂಗಾರು ಅಧಿವೇಶನ ಅವಧಿಯನ್ನು ವಿಸ್ತರಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.
ಪ್ರತಿಪಕ್ಷಗಳ ಜತೆ ಮಾತುಕತೆಗೆ ಸಿದ್ಧ ಎಂದು ಸರ್ಕಾರ ಹೇಳುತ್ತದೆ. ಆದರೆ, ಮಾತುಕತೆಯ ಬಾಗಿಲನ್ನು ಮುಚ್ಚುತ್ತಿದೆ ಎಂದು ಝಾ ಹೇಳಿದ್ದಾರೆ.
ಜುಲೈ 19ರಂದು ಮುಂಗಾರು ಅಧಿವೇಶನ ಆರಂಭವಾದ ಬಳಿಕ ನಿರಂತರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಸುಗಮ ಕಲಾಪ ನಡೆದಿಲ್ಲ. ಪೆಗಾಸಸ್ ಕುತಂತ್ರಾಂಶ ಕುರಿತ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟುಹಿಡಿದಿರುವ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಯುಂಟುಮಾಡುತ್ತಿವೆ.
ನಿಗದಿತ ಅವಧಿಗೆ ಸಂಸತ್ ಕಲಾಪ ನಡೆಯದೇ ಇರುವುದರಿಂದ ₹133 ಕೋಟಿ ಸಾರ್ವಜನಿಕ ತೆರಿಗೆ ಹಣ ವ್ಯರ್ಥವಾಗಿದೆ ಎಂದು ಇತ್ತಿಚೆಗೆ ವರದಿಯೊಂದರಿಂದ ತಿಳಿದುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.