ನರೇಂದ್ರ ಮೋದಿ
ನವದೆಹಲಿ: ಬೊಜ್ಜಿನ ವಿರುದ್ಧ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದಾರೆ. ಈ ಹೋರಾಟವನ್ನು ಶಕ್ತಿಯುತಗೊಳಿಸಲು ‘ಸವಾಲು ಸ್ವೀಕಾರ’ ಆಂದೋಲನವನ್ನು ಆರಂಭಿಸುವುದಾಗಿ ತಮ್ಮ ‘ಮನದ ಮಾತು’ ಕಾರ್ಯಕ್ರಮದಲ್ಲಿ ಭಾನುವಾರ ಹೇಳಿದ್ದರು. ಅದರಂತೆ ಸವಾಲು ಸ್ವೀಕರಿಸುವಂತೆ ವಿವಿಧ ಕ್ಷೇತ್ರಗಳ 10 ಸೆಲೆಬ್ರಿಟಿಗಳ ಹೆಸರನ್ನು ಪ್ರಧಾನಿ ಮೋದಿ ಸೋಮವಾರ ಹೆಸರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉದ್ಯಮಿ ಆನಂದ್ ಮಹೀಂದ್ರಾ, ನಟರಾದ ಮೋಹನ್‌ಲಾಲ್ ಮತ್ತು ಆರ್. ಮಾಧವನ್, ಶೂಟಿಂಗ್ ಚಾಂಪಿಯನ್ ಮನು ಭಾಕರ್, ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಇನ್ಫೊಸಿಸ್ ಸಹ ಸಂಸ್ಥಾಪಕರಾದ ನಂದನ್ ನೀಲೇಕಣಿ ಮತ್ತು ಸುಧಾ ಮೂರ್ತಿ, ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಭೋಜ್‌ಪುರಿ ಗಾಯಕ, ನಟ ನಿರಹುವಾ ಅವರನ್ನು ಪ್ರಧಾನಿ ಮೋದಿ ಹೆಸರಿಸಿದ್ದಾರೆ.
‘ಬೊಜ್ಜಿನ ವಿರುದ್ಧದ ಹೋರಾಟವನ್ನು ಶಕ್ತಿಯುತಗೊಳಿಸಲು, ಅಡುಗೆ ಎಣ್ಣೆ ಬಳಕೆಯನ್ನು ಕಡಿತಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ಎಲ್ಲರನ್ನು ಹೆಸರಿಸುತ್ತಿದ್ದೇನೆ. ಈ ಎಲ್ಲರೂ ಇನ್ನು 10 ಮಂದಿಯನ್ನು ಹೆಸರಿಸಲು ಕೋರುತ್ತೇನೆ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೊಜ್ಜಿನ ವಿರುದ್ಧ ಹೋರಾಡಲು ಅಡುಗೆ ಎಣ್ಣೆ ಬಳಕೆಯ ಪ್ರಮಾಣವನ್ನು ಶೇ 10ರಷ್ಟು ಕಡಿತ ಮಾಡುವಂತೆ ಪ್ರಧಾನಿ ಅವರು ಜನರಲ್ಲಿ ಕೋರಿದ್ದರು.
ಈ ಆಂದೋಲನದಲ್ಲಿ ಭಾಗವಹಿಸಲು ನನಗೆ ಸಂತೋಷವಾಗುತ್ತಿದೆ. ಬೊಜ್ಜಿನಿಂದಾಗಿ ಹೃದಯ ಸಂಬಂಧಿ ರೋಗಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಒತ್ತಡ ಮತ್ತು ಖಿನ್ನತೆಯೂ ಎದುರಾಗುತ್ತದೆ.ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ
ಶೇ 10ರಷ್ಟು ಅಡುಗೆ ಎಣ್ಣೆ ಬಳಕೆ ಕಡಿತ ಮಾಡಿಕೊಳ್ಳುವ ಸಣ್ಣ ಬದಲಾವಣೆಯು ದೊಡ್ಡ ಕೊಡುಗೆ ನೀಡಬಲ್ಲದು. ಇದು ನಿಮ್ಮ ಆರೋಗ್ಯಕ್ಕೂ ಕುಟುಂಬದ ಆರ್ಥಿಕತೆಗೂ ಒಳ್ಳೆಯದು. ಇಂಥ ಕ್ರಮ ಕೈಗೊಂಡ ಮೋದಿ ಅವರಿಗೆ ಅಭಿನಂದನೆಗಳು.ಆನಂದ್ ಮಹೀಂದ್ರಾ, ಉದ್ಯಮಿ
ಅಡುಗೆ ಎಣ್ಣೆ ಬಳಕೆ ಕಡಿತ ಮಾಡುವುದು ದೇಶದ ಆರ್ಥಿಕತೆಯನ್ನು ಶಕ್ತಿಯುತಗೊಳಿಸುತ್ತದೆ. ಇದರಿಂದ ದೇಶದ ಆಮದು ಕಡಿಮೆಯಾಗುತ್ತದೆ ಜೊತೆಗೆ ಸಂಪನ್ಮೂಲಗಳು ಉಳಿಯುತ್ತವೆ.ನಂದನ್ ನಿಲೇಕಣಿ, ಇನ್ಫೊಸಿಸ್ ಸಹ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.