ADVERTISEMENT

ವಿಝಿಂಜಂ ಬಂದರು ಉದ್ಘಾಟಿಸಿದ ಮೋದಿ: ನವಯುಗದ ಅಭಿವೃದ್ಧಿಯ ಸಂಕೇತ ಎಂದು ಬಣ್ಣನೆ

ಪಿಟಿಐ
Published 2 ಮೇ 2025, 9:59 IST
Last Updated 2 ಮೇ 2025, 9:59 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ&nbsp;ವಿಳಿಂಜಂ ಬಂದರು ಉದ್ಘಾಟಿಸಿದರು</p></div>

ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ವಿಳಿಂಜಂ ಬಂದರು ಉದ್ಘಾಟಿಸಿದರು

   

–ಪಿಟಿಐ ಚಿತ್ರ

ತಿರುವನಂತಪುರ: ದೇಶದ ಜಲ ಮಾರ್ಗದ ವ್ಯಾಪಾರಕ್ಕೆ ಹೆಚ್ಚಿನ ಬಲ ತುಂಬಲಿರುವ ತಿರುವನಂತಪುರದ ವಿಝಿಂಜಂ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ‘ನವಯುಗದ ಅಭಿವೃದ್ಧಿಯ ಸಂಕೇತ’ ಎಂದು ಬಣ್ಣಿಸಿದರು. 

ADVERTISEMENT

ಕೇರಳದಲ್ಲಿ ಬಹುಕಾಲದಿಂದ ಪೂರ್ಣಗೊಳ್ಳಲು ಬಾಕಿ ಉಳಿದಿದ್ದ ಈ ಕನಸಿನ ಯೋಜನೆಯ ಶ್ರೇಯವನ್ನು ತನ್ನದಾಗಿಸಿಕೊಳ್ಳಲು ವಿವಿಧ ರಾಜಕೀಯ ಪಕ್ಷಗಳ ನಡುವಿನ ಪೈಪೋಟಿಗೆ ಉದ್ಘಾಟನಾ ಸಮಾರಂಭ ಸಾಕ್ಷಿಯಾಯಿತು.

ಈ ಯೋಜನೆಯು ‘ಇಂಡಿಯಾ’ ಒಕ್ಕೂಟದ ಕೆಲವು ನಾಯಕರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಲಿದೆ ಎಂದು ಮೋದಿ ಹೇಳಿದರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಯೋಜನೆಯನ್ನು ಸಿಪಿಎಂ ಸರ್ಕಾರದ ಸಾಧನೆ ಎಂದು ಹೇಳಿದರು. ಆದರೆ, ಕೇರಳದ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ಕೊಡುಗೆಗಳ ಬಗ್ಗೆ ಅವರು ಯಾವುದೇ ಉಲ್ಲೇಖ ಮಾಡಲಿಲ್ಲ.

₹8,800 ಕೋಟಿ ಮೊತ್ತದ ಈ ಯೋಜನೆಯು ಮುಂದಿನ ದಿನಗಳಲ್ಲಿ ದೇಶದ ಜಲ ಮಾರ್ಗದ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಲಯಾಳದಲ್ಲಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಹೇಳಿದರು.

‘ವಿಝಿಂಜಂ ಬಂದರು ಕೇರಳವನ್ನು ಜಾಗತಿಕ ಜಲ ಮಾರ್ಗದ ವ್ಯಾಪಾರದ ಪ್ರಮುಖ ಕೇಂದ್ರವನ್ನಾಗಿಸಲಿದೆ ಮತ್ತು ಭಾರತದ ಜಲ ಮಾರ್ಗದ ವ್ಯಾಪಾರ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಬಂದರನ್ನು ಹೊಂದಿರುವ ನಗರಗಳು ವಿಕಸಿತ ಭಾರತದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಕಸಿತ ಕೇರಳ ನಿರ್ಮಾಣದಲ್ಲಿ ನಾವು ಜತೆಯಾಗಿ ಕೆಲಸ ಮಾಡೋಣ’ ಎಂದರು.

ಈ ಬೃಹತ್ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಅದಾನಿ ಸಮೂಹವನ್ನು ಶ್ಲಾಘಿಸಿದ ಮೋದಿ, ‘ಕಮ್ಯುನಿಸ್ಟ್ ಪಕ್ಷದ ಒಬ್ಬ ಸಚಿವರು (ಕೇರಳದ ಬಂದರು ಸಚಿವ ವಿ.ಎನ್ ವಾಸವನ್) ಕೂಡಾ ಈ ಯೋಜನೆಯ ಖಾಸಗಿ ಪಾಲುದಾರರ ಕೊಡುಗೆಗಳನ್ನು ಕೊಂಡಾಡಿದ್ದಾರೆ’ ಎಂದರು.

ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರು ತಡವಾಗಿ ಆಹ್ವಾನ ನೀಡಿರುವುದಕ್ಕೆ ಪ್ರತಿಭಟಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

ಈ ಬಂದರು ಯೋಜನೆ ಸಾಕಾರಗೊಳ್ಳಲು ಉಮ್ಮನ್‌ ಚಾಂಡಿ ನೇತೃತ್ವದ ಹಿಂದಿನ ಯುಡಿಎಫ್‌ ಸರ್ಕಾರ ನೀಡಿರುವ ಕೊಡುಗೆಗಳನ್ನು ಗುರುತಿಸದೇ ಇರುವುದಕ್ಕೆ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತರೂರ್‌ ಹಾಜರಿ ಹಲವರ ನಿದ್ದೆಗೆಡಿಸಲಿದೆ’

ವಿಝಿಂಜಂ ಬಂದರು ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಪಾಲ್ಗೊಳ್ಳುವಿಕೆಯು ಹಲವರಿಗೆ ‘ನಿದ್ದೆಯಿಲ್ಲದ ರಾತ್ರಿಗಳನ್ನು’ ನೀಡಲಿದೆ ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ನ ಕಾಲೆಳೆದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿರೋಧ ಪಕ್ಷಗಳ (ಇಂಡಿ ಒಕ್ಕೂಟ) ಮೈತ್ರಿಕೂಟದ ‘ಆಧಾರ ಸ್ತಂಭ’ ಎಂದು ಪ್ರಧಾನಿ ಹೇಳಿದರು.

‘ನೀವು ಇಂಡಿ ಮೈತ್ರಿಕೂಟದ ಆಧಾರ ಸ್ತಂಭ ಎಂದು ನಾನು ನಮ್ಮ ಮುಖ್ಯಮಂತ್ರಿಗಳಿಗೆ ಹೇಳಲು ಬಯಸುತ್ತೇನೆ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆಯು ಅನೇಕರ ನಿದ್ದೆಯನ್ನು ಕಸಿದುಕೊಳ್ಳಲಿದೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.